ಜಮ್ಮು-ಕಾಶ್ಮೀರದಲ್ಲಿ ಶಾಂತಿ ಕಾಪಾಡಿ ; ಭಾರತ ಮತ್ತು ಪಾಕಿಸ್ತಾನ ಸರ್ಕಾರಗಳಿಗೆ ವಿಶ್ವಸಂಸ್ಥೆ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್, ದೇಶ

ನ್ಯೂಯಾರ್ಕ್ : ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ 370 ವಿಧೇಯಕವನ್ನು ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡುವಂತೆ ಭಾರತ ಮತ್ತು ಪಾಕಿಸ್ತಾನದ ಸರ್ಕಾರಗಳಿಗೆ ವಿಶ್ವಸಂಸ್ಥೆ ತಾಕೀತು ಮಾಡಿದೆ.

ಮುಂದಿನ ದಿನಗಳಲ್ಲಿ ಈ ವಿವಾದ ಮತ್ತಷ್ಟು ಕಾವು ಪಡೆದು ಹಿಂಸಾಚಾರ ನಡೆಯುವ ಸೂಚನೆಯನ್ನೂ ನೀಡಿದೆ. ಭಾರತದ ಈ ನಡೆಯನ್ನು ಈಗಾಗಲೇ ವಿರೋಧಿಸಿರುವ ಪಾಕಿಸ್ತಾನದ ಸರ್ಕಾರ ಇಂದು ಪಾಕ್ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಲು ಮುಂದಾಗಿದೆ. ಜಮ್ಮು-ಕಾಶ್ಮೀರದ ಕುರಿತಾದ ಈ ಎರಡೂ ದೇಶಗಳ ನಡೆಯಿಂದ ಕಣಿವೆ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಭುಗಿಲೇಳುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿ ಕಾಣುತ್ತಿವೆ.

ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎರಡೂ ದೇಶಗಳಿಗೆ ಸೂಚನೆ ನೀಡಿರುವ ವಿಶ್ವಸಂಸ್ಥೆ ಹಾಗೂ ಅಮೆರಿಕಾ ಜಮ್ಮು-ಕಾಶ್ಮೀರ ಭಾಗದಲ್ಲಿ ಶಾಂತಿ ಕಾಪಾಡುವಂತೆ ಹಾಗೂ ಕಾನೂನು ಸುವ್ಯವಸ್ಥೆಯನ್ನು ಪಾಲಿಸುವಂತೆ ತಾಕೀತು ಮಾಡಿದೆ.

ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸುವ ವಿಧೇಯಕವನ್ನು ಗೃಹ ಸಚಿವ ಅಮಿತ್ ಶಾ ಸೋಮವಾರ ರಾಜ್ಯಸಭೆಯಲ್ಲಿ ಮಂಡಿಸಿದರು. ಪರಿಣಾಮ ಕಣಿವೆ ರಾಜ್ಯದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಮುಂಜಾಗ್ರತಾ ಕ್ರಮವಾಗಿ ಇಡೀ ರಾಜ್ಯದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು, ಪ್ರಮುಖ ರಾಜಕೀಯ ನಾಯಕರನ್ನು ಬಂಧನದಲ್ಲಿಡಲಾಗಿದೆ.