ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ; ಅಪಾಯಕಾರಿ ಸಾಹಸ , ಸೆಲ್ಫಿ, ಈಜಾಟ : ಸ್ಥಳೀಯರ ಆಕ್ರೋಶ -vishwanews24

Featured, ರಾಜ್ಯ ನ್ಯೂಸ್

ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ; ಅಪಾಯಕಾರಿ ಸಾಹಸ , ಸೆಲ್ಫಿ, ಈಜಾಟ : ಸ್ಥಳೀಯರ ಆಕ್ರೋಶ

ಮಡಿಕೇರಿ: ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತಿರುವ ಕೊಡಗಿನ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಆದರೆ ಕೆಲವರ ನಿರ್ಲಕ್ಷ್ಯದ ಸಾಹಸ ಈಗ ಆತಂಕಕ್ಕೂ ಕಾರಣವಾಗಿದೆ.

ಮಳೆಗಾಲದ ಅಬ್ಬರಕ್ಕೆ ಕೊಡಗು ಜಿಲ್ಲೆಯ ಜಲಪಾತಗಳು ಭೋರ್ಗರೆದು ಹರಿಯುತ್ತಿವೆ. ಈ ಸುಂದರ ದೃಶ್ಯವನ್ನು ನೋಡಲು ಪ್ರತಿದಿನ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಆದರೆ ಕೆಲವರು ಪ್ರಕೃತಿಯ ಸೌಂದರ್ಯವನ್ನು ಸವಿಯುವ ಬದಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಅಪಾಯಕಾರಿ ಸಾಹಸ ಮಾಡುತ್ತಿರುವುದು ಕಳವಳ ಮೂಡಿಸಿದೆ.

ಕೊಡಗಿನ ಪ್ರಸಿದ್ಧ ಅಬ್ಬಿ ಜಲಪಾತ ಹಾಗೂ ಮೇಧುರ–ಸೂರ್ಲಬ್ಬಿ ಜಲಪಾತಗಳಲ್ಲಿ ಪ್ರವಾಸಿಗರ ನಿರ್ಲಕ್ಷ್ಯ ಹೆಚ್ಚಾಗಿದೆ. ಜಲಪಾತದ ಬುಡಕ್ಕೆ ಇಳಿದು ಈಜುವುದು, ಅಪಾಯಕಾರಿ ಬಂಡೆಗಳ ಮೇಲೆ ನಿಂತು ಸೆಲ್ಫಿ ಹಾಗೂ ವಿಡಿಯೊ ತೆಗೆಯುವುದು ಸಾಮಾನ್ಯ ದೃಶ್ಯವಾಗಿದೆ.

ಈ ಹಿಂದೆಯೂ ಇದೇ ಜಲಪಾತಗಳಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಇನ್ನೂ ಅನೇಕ ಮಂದಿಯನ್ನು ಸ್ಥಳೀಯರು ತಮ್ಮ ಜೀವದ ಹಂಗು ತೊರೆದು ರಕ್ಷಿಸಿದ ಘಟನೆಗಳೂ ನಡೆದಿವೆ. ಆದರೂ ಎಚ್ಚರಿಕೆಗಳನ್ನು ಲೆಕ್ಕಿಸದೆ ಕೆಲವರು ಅಪಾಯವನ್ನು ಆಹ್ವಾನಿಸುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರವಾಸಿಗರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಅಪಾಯಕಾರಿ ಪ್ರದೇಶಗಳಿಗೆ ಇಳಿಯುವುದನ್ನು ತಪ್ಪಿಸಬೇಕು. ಜಲಪಾತಗಳ ಬಳಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ನಿಗಾ ಹೆಚ್ಚಿಸಿ, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply