ಡಿಕೆಶಿ ಗೆ ಒಲಿದು ಬರಲಿದೆಯಾ ಕೆಪಿಸಿಸಿ ನೂತನ ಅಧ್ಯಕ್ಷ ಪಟ್ಟ ..?? Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ಬಹುನಿರೀಕ್ಷಿತ ಕೆಪಿಸಿಸಿ ನೂತನ ಅಧ್ಯಕ್ಷರ ನೇಮಕ ಬಹುತೇಕ ಅಂತಿಮಗೊಂಡಿದ್ದು, ಶುಕ್ರವಾರ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಹೆಸರನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂತಿಮಗೊಳಿಸಿದ್ದಾರೆ ಎಂದು ಹೇಳಲಾಗಿದೆ.

ಅಧಿಕೃತ ಘೋಷಣೆಗೆ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಡಿಕೆಶಿಗೆ ಅಭಿನಂದನೆಗಳ ಮಹಾಪೂರ ವ್ಯಕ್ತವಾಗಿದೆ. ಗುರುವಾರ ಸಂಜೆ ಅವರ ನಿವಾಸಕ್ಕೆ ಆಪ್ತ ಮುಖಂಡರು, ಬೆಂಬಲಿಗರು ಆಗಮಿಸಿ ಅಭಿನಂದಿಸಿರುವುದು ವಿಶೇಷವಾಗಿದೆ.

ಈ ನಡುವೆ, ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಕುರಿತು ಗುರುವಾರ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ರಾಜ್ಯ ಉಸ್ತುವಾರಿ ಸಚಿವ ಕೆ.ಸಿ. ವೇಣುಗೋಪಾಲ್‌ ಸಭೆ ನಡೆಸಿದರು.

ಕೆಪಿಸಿಸಿ ಹೊಸ ಸಾರಥಿ ಆಯ್ಕೆ ವಿಚಾರ ಮಾಜಿ ಸಿಎಂ ಸಿದ್ದರಾಮಯ್ಯ ಬಣ ಹಾಗೂ ಮೂಲ ಕಾಂಗ್ರೆಸಿಗ ನಡುವೆ ಪ್ರತಿಷ್ಠೆಯಾಗಿ ಪರಿಣಮಿಸಿತ್ತು. ರಾಜ್ಯದಲ್ಲಿ ಪಕ್ಷದ ಮೇಲಿನ ಬಿಗಿ ಹಿಡಿತ ಮುಂದುವರಿಯಲು ತಮಗೆ ಆಪ್ತರಾದವರೇ ಗಾದಿ ಹಿಡಿಯಬೇಕು ಎಂದು ಸಿದ್ದರಾಮಯ್ಯ ಬಯಸಿದ್ದರು. ಮತ್ತೊಂದೆಡೆ, ಪಕ್ಷದ ಮೇಲೆ ಸಿದ್ದರಾಮಯ್ಯ ಪ್ರಾಬಲ್ಯ ತಗ್ಗಿಸಲು ಮೂಲ ಕಾಂಗ್ರೆಸಿಗರೇ ಆಗಬೇಕೆಂದು ಹಿರಿಯ ನಾಯಕರು ಪ್ರಯತ್ನ ನಡೆಸಿದ್ದರು.

ಉಪಚುನಾವಣೆ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದು, ಬಳಿಕ ಹಲವು ಮಂದಿ ಕೆಪಿಸಿಸಿ ಅಧ್ಯಕ್ಷರ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವುದಕ್ಕೆ ಮುಂದಾಗಿದ್ದರು. ಆದರೆ ಅಂತಿಮವಾಗಿ ಎಐಸಿಸಿ ಡಿ.ಕೆ ಶಿವಕುಮಾರ್‌ ಆಯ್ಕೆ ಮಾಡಿದೆ ಎಂದು ಹೇಳಲಾಗಿದ್ದು, ಇಂದು ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.