ತೀರ್ಪುಗಾರಿಕೆಯಲ್ಲಿ ದೋಷ ಆರೋಪ ; ಕಾಲೇಜು ವಿದ್ಯಾರ್ಥಿಗಳ ಕಬಡ್ಡಿ ಪಂದ್ಯಾಕೂಟ ರದ್ದು
ಕಾಪು : ಕಾಪು ಸಮೀಪದ ಇನ್ನಂಜೆ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆದ ತಾಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕಬ್ಬಡಿ ಪಂದ್ಯಾಕೂಟ, ತೀರ್ಪುಗಾರಿಕೆ ದೋಷ ಆಗಿದೆ ಎಂದು ಆರೋಪಿಸಿ ಪೊಲಿಪು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟಿಸಿದರ ಪರಿಣಾಮ ಕಬ್ಬಡ್ಡಿ ಪಂದ್ಯಾಕೂಟ ರದ್ದುಗೊಂಡ ಘಟನೆ ನಡೆದಿದೆ.
ಯಾವುದೇ ಪೂರಕ ವ್ಯವಸ್ಥೆಯಿಲ್ಲದೆ ಹಾಗೂ ಕೇವಲ ಬೆರಳೆಣೆಕೆ ಮಂದಿ ತೀರ್ಪುಗಾರರೊಂದಿಗೆ ಆರಂಭಗೊಂಡ ಈ ಪಂದ್ಯಾಕೂಟ ಬಾಲಕಿಯರ ವಿಭಾಗದಲ್ಲಿ ಯಾವುದೇ ತೊಂದರೆ ಇಲ್ಲದೆ ಅಂತ್ಯಗೊಂಡರೆ, ಬಾಲಕರ ವಿಭಾಗದಲ್ಲಿ ಮಾತ್ರ ಪೊಲಿಪು ಸರ್ಕಾರಿ ಶಾಲೆ ಹಾಗೂ ಮುದರಂಗಡಿ ಖಾಸಗಿ ಶಾಲೆಯ ನಡುವೆ ಕ್ವಾಟರ್ ಫೈನಲ್ ಮಧ್ಯೆ ಆರಂಭಗೊಂಡಿದ್ದು, ಅಂತಿಮವಾಗಿ ತೀರ್ಪೂಗಾರರು ಪೊಲಿಪು ವಿರುದ್ಧ ತೀರ್ಪು ನೀಡಿದ್ದಾರೆ ಎಂಬುದಾಗಿ ಪಂದ್ಯ ಕಳಕೊಂಡ ಬಳಿಕ ಆರೋಪಿಸಿದ ಪೊಲಿಪು ತಂಡದ ಆಟಗಾರರು ಬಿಸಿಲು ಮಳೆಯನ್ನೂ ಲೆಕ್ಕಿಸದೆ ಆಟದ ಮೈದಾನದಲ್ಲೇ ಕುಳಿತು ಪ್ರತಿಭಟಿಸಿದರು. ಅವರ ಮನವೊಲಿಸಲು ತೀರ್ಪುಗಾರರು ಹಾಗೂ ಸಂಘಟಕರು ಯತ್ನಿಸಿದರೂ ಪ್ರಯತ್ನ ವಿಫಲಗೊಂಡಿತ್ತು. ಸಾರ್ವಜನಿಕರು ಎರಡೂ ತಂಡಗಳಿಗೆ ಬೆಂಬಲವಾಗಿ ಕಿರುಚಾಟ ನಡೆಸುತ್ತಿದ್ದಂತೆ, ಸಂಘಟಕರು ಹಾಗೂ ದೈಹಿಕ ಶಿಕ್ಷಕರು ಪಂದ್ಯಾಕೂಟ ರದ್ದುಗೊಳಿಸಲಾಗಿದೆ ಎಂಬುದಾಗಿ ಘೋಷಿಸಿದರು.
ಈ ಬಗ್ಗೆ ಮಾತನಾಡಿದ ದೈಹಿಕ ಶಿಕ್ಷಕ ಚಂದ್ರಶೇಖರ್, ” ತೀರ್ಪುಗಾರಿಕೆಯಲ್ಲಿ ಯಾವುದೇ ದೋಷವಾಗಿಲ್ಲ , ಸೋಲಿನ ಹತಾಶೆಯಿಂದ ವಿನಾ ಕಾರಣ ವಿದ್ಯಾರ್ಥಿಗಳು ಆ ರೀತಿ ವರ್ತಿಸಿದ್ದಾರೆ, ಅವರ ವರ್ತನೆಯಿಂದ ಪಂದ್ಯಾಕೂಟ ಮುಂದುವರಿಸಲು ಅಸಾಧ್ಯವಾಗಿದ್ದರಿಂದ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.
ಪೊಲಿಪು ಶಾಲಾ ಆಟಗಾರರು ಮಾತನಾಡಿ, “ಯಾವುದೇ ವ್ಯವಸ್ಥೆಯಿಲ್ಲದೆ ಕಬ್ಬಡಿ ಪಂದ್ಯಾಕೂಟ ನಡೆಸಿದ್ದಲ್ಲದೆ, ಕುಡಿಯುವುದಕ್ಕೆ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಲ್ಲ, ಹಾಗೂ ಅಂಕ ಬರೆಯುವುದಕ್ಕೆ ಯಾರೋ ಶಿಕ್ಷಣ ಇಲಾಖೆ ಸಂಬಂಧ ಪಡದ ವ್ಯಕ್ತಿಯನ್ನು ನೇಮಿಸಿದ್ದಾರೆ, ಅಲ್ಲದೇ ಅಂಕಪಟ್ಟಿ ನೋಡುವುದಕ್ಕೆ ಅವಕಾಶ ನೀಡಲಿಲ್ಲ , ತೀರ್ಪುಗಾರರು ನಮಗೆ ಅನ್ಯಾಯ ಮಾಡಿದ್ದಾರೆ ಎಂಬುದಕ್ಕೆ ಮೊಬೈಲಿನಲ್ಲಿ ಚಿತ್ರೀಕರಿಸಿದ ವಿಡಿಯೋ ನಮ್ಮಲ್ಲಿದೆ ” ಎಂದಿದ್ದಾರೆ.
