ದುರಂತ ಅಂತ್ಯ: ಚಂದನ್ ಸಾವಿನ ಬೆನ್ನಲ್ಲೇ, ಮಗ ತುಷಾರ್​, ಪತ್ನಿ ಮೀನಾ ಕೂಡ ಸಾವು

Featured, ರಾಜ್ಯ ನ್ಯೂಸ್
ಬೆಂಗಳೂರು: ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ, ನಿರೂಪಕ ಚಂದನ್ ಸಾವಿನ ಬಳಿಕ ಮಗನ ಕತ್ತು ಸೀಳಿ ಕೊಂದು ತಾವು ಆತ್ಮಹತ್ಯೆಗೆ ಯತ್ನಿಸಿದ್ದ ಪತ್ನಿ ಮೀನಾ ಕೂಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನಟ, ನಿರೂಪಕ ಚಂದನ್ ಕಳೆದ ಮೇ 24ರಂದು ಅಪಘಾತದಲ್ಲಿ ಸಾವನ್ನಪ್ಪಿದ್ದರು. ಇದರ ನೋವಿನಲ್ಲಿದ್ದ ಪತ್ನಿ ಮೀನಾ ಇಂದು ತಮ್ಮ ಮಗ ತುಷಾರ್ ನ ಕತ್ತು ಸೀಳಿ ಕೊಂದು ಹಾಕಿದ್ದರು. ಬಳಿಕ ತಾವು ಕೂಡ ಆ್ಯಸಿಡ್ ಮಿಶ್ರಿತ ಫಿನಾಯಿಲ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಮಯಕ್ಕಾಗಮಿಸಿದ ಮೀನಾ ಸಹೋದರ ಅವರನ್ನು ಕೂಡಲೇ ಸ್ಥಳೀಯರ ನೆರವಿನಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಿದ್ದರು. ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆಯೇ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾಗೆ ಶಿಫ್ಟ್ ಮಾಡಲಾಗತ್ತು. ಆದರೆ ಇಲ್ಲೂ ಚಿಕಿತ್ಸೆ ಫಲಕಾರಿಯಾಗದೇ ಮೀನಾ ಅವರು ಸಾವನ್ನಪ್ಪಿದ್ದಾರೆ.
ಹೀರೋ ಆಗಬೇಕಿದ್ದವ ತಾಯಿಯಿಂದಲೇ ಹತ್ಯೆಯಾದ
ಇನ್ನು ಇಂದು ಬೆಳಗ್ಗೆ ತನ್ನ ಸ್ವಂತ ತಾಯಿಯಿಂದಲೇ ಹತ್ಯೆಗೀಡಾದ ಚಂದನ್ ಪುತ್ರ ತುಷಾರ್ ಭವಿಷ್ಯದಲ್ಲಿ ನಟನಾಗಬೇಕು ಎಂದುಕೊಂಡಿದ್ದನಂತೆ. ಅತನ ತಂದೆ ಚಂದನ್ ಕೂಡ ತಮ್ಮ ಪುತ್ರನನ್ನು ನಟನಾಗಿ ಮಾಡಬೇಕು ಎಂಬ ಆಸೆ ಹೊತ್ತಿದ್ದರಂತೆ. ಆದರೆ ಚಂದನ್ ಅವರ ಅಕಾಲಿಕ ಮರಣ ಅವರು ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಚಂದನ್ ಸಾವಿನ ನೋವು ಭರಿಸಲಾಗಿದೇ ಅವರ ಪತ್ನಿ ಮೀನಾ ಇಂತಹ ಘೋರ ಕೃತ್ಯಕ್ಕೆ ಕೈ ಹಾಕಿ ತಮ್ಮ ಮಗನನ್ನೇ ಕೊಂದು ಹಾಕಿದ್ದಾರೆ. ಆ ಮೂಲಕ ನಟನಾಗ ಬೇಕಿದ್ದ ತುಷಾರ್ ಕೇವಲ ತನ್ನ 13ನೇ ವಯಸ್ಸಿನ ಪ್ರಾಯದಲ್ಲಿ ಸಾವನ್ನಪ್ಪಿದ್ದಾನೆ.
ದುಃಖದಲ್ಲೂ ಮಾನವೀಯತೆ: ಅಣ್ಣಾವ್ರ ಅಭಿಮಾನಿ ಚಂದನ್ ಪುತ್ರನ ನೇತ್ರದಾನ
ದು:ಖದ ಮಡುವಿನಲ್ಲಿಯೂ ನಟ ಮೃತ ಚಂದನ್ ಕುಟುಂಬ ಮಾನವೀಯತೆ ಮೆರೆದಿದ್ದು, ಇಂದು ಹತ್ಯೆಗೀಡಾದ ಚಂದನ್ ಪುತ್ರನ ನೇತ್ರದಾನ ಮಾಡುವುದರ ಮೂಲಕ ಮಾದರಿ ಕೆಲಸ ಮಾಡಿದೆ. ನಗರದ ಅಭಿಷೇಕ್ ನೇತ್ರಾಲಯಕ್ಕೆ ಕಣ್ಣುಗಳನ್ನು ದಾನ ಮಾಡಲು ಅವರ ಕುಟುಂಬ ನಿರ್ಧರಿಸಿದೆ. ಇನ್ನು ಡಾ. ರಾಜ್​ಕುಮಾರ್ ಅವರನ್ನು ತನ್ನ ಆರಾಧ್ಯ ದೈವವೆಂದೇ ನಂಬಿದ್ದ ಚಂದನ್, ಅಣ್ಣಾವ್ರ ಪ್ರತಿವಾಕ್ಯವನ್ನೂ ಪಾಲಿಸ್ತಾ ಇದ್ದರು.
ಇದೇ ಹಿನ್ನೆಲೆಯಲ್ಲಿ ಅಣ್ಣಾವ್ರಂತೆ ತಮ್ಮ ನೇತ್ರವನ್ನೂ ದಾನ ಮಾಡಬೇಕು ಎಂದು ಚಂದನ್ ಬಯಸಿದ್ದರು ಎನ್ನಲಾಗಿದೆ. ಆದರೆ, ಅವರು ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದ್ದರು. ಇದೇ ಹಿನ್ನೆಲೆಯಲ್ಲಿ ಚಂದನ್ ಕುಟುಂಬ ಅವರ ಪುತ್ರನ ನೇತ್ರದಾನ ಮಾಡಿದೆ ಅಂತಾ ಹೇಳಲಾಗುತ್ತಿದೆ. ಚಂದನ್ ಅಕಾಲಿಕ ನಿಧನದಿಂದ ಶಾಕ್​ಗೆ ಒಳಗಾಗಿದ್ದ ಅವರ ಪತ್ನಿ ಮೀನಾ, ಇಂದು ತಮ್ಮ ಮಗು 13 ವರ್ಷದ ತುಷಾರ್​ನ ಕತ್ತು ಸೀಳಿ ಹತ್ಯೆ ಮಾಡಿದ್ದರು. ಅಲ್ಲದೇ, ತಾವೂ ಆ್ಯಸಿಡ್ ಕುಡಿದಿದ್ದರು.