ದೇಶಪ್ರೇಮೆವಿದ್ದರೆ ರಾಜೀನಾಮೆ ನೀಡಿರುವ ಶಾಸಕರಿಗೆ ಯಾವುದೇ ಸ್ಥಾನ ಕೊಡಬೇಡಿ : ಬಿಜೆಪಿಗೆ ಯು.ಟಿ.ಖಾದರ್‌ -Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರು: ‘ನಿಮಗೆ ದೇಶಪ್ರೇಮೆ, ಜನರ ಮೇಲೆ ಹಾಗೂ ಸಂವಿಧಾನದ ಮೇಲೆ ವಿಶ್ವಾಸವಿದ್ದರೆ ಈಗ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರಿಗೆ ಯಾವುದೇ ಸ್ಥಾನ ಕೊಡಬೇಡಿ’ ಎಂದು ಸಚಿವ ಯು.ಟಿ.ಖಾದರ್‌ ಬಿಜೆಪಿಗೆ ಸವಾಲು ಹಾಕಿದರು.

‘ನಮ್ಮ ದೇಶದ ಮೇಲೆ ದಾಳಿ ಮಾಡಿದವರಿಗೆ ಕೆಂಪು ಹಾಸು ಹಾಸುತ್ತೀರಿ. ಪಾಕ್‌ ಪ್ರಧಾನಿಯ ಜೊತೆಗೆ ಬಿರಿಯಾನಿ ಊಟ ಮಾಡುತ್ತೀರಿ. ಆದರೆ ನಮಗೆ ಮಾತ್ರ ನಮ್ಮವರ ಜತೆ ಮತನಾಡಲು ಅವಕಾಶ ಕೊಡದೆ ತಡೆಯುತ್ತೀರಿ. ಅಧಿಕಾರಕ್ಕಾಗಿ ಏನೆಲ್ಲಾ ಮಾಡುತ್ತಿದ್ದೀರಿ. ಇಂದು ಆತ್ಮಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ’ ಎಂದು ಖಾದರ್ ತಿರುಗೇಟು ನೀಡಿದರು.

‘ಮುಂಬೈನಲ್ಲಿರುವವರನ್ನು ಅತೃಪ್ತರು ಎಂದು ಬಿಂಬಿಸಿ ಮಾಧ್ಯಮದವರು ತಪ್ಪು ಮಾಡುತ್ತಿದ್ದಾರೆ. ವಾಸ್ತವವಾಗಿ ಅವರೆಲ್ಲರೂ ತೃಪ್ತರು. ಅವರು ಬೆಂಗಳೂರಿಗೆ ವಾಪಸ್ ಬಂದ ಮೇಲೆ ಎಲ್ಲವೂ ಬಯಲಾಗುತ್ತದೆ’ ಎಂದು ಛೇಡಿಸಿದರು.

‘ನಮ್ಮ ಶಾಸಕರಿಗೆ ಬಂದೂಕು ತೋರಿಸಿ ಬೆದರಿಸುತ್ತಿದ್ದೀರಿ. ಬಿಜೆಪಿಯ ರಾಜ್ಯ ಮತ್ತು ಕೇಂದ್ರ ನಾಯಕರು ಇದರಲ್ಲಿ ಶಾಮೀಲಾಗಿದ್ದಾರೆ. ಅನುಭವಿ ವಕೀಲರಿಂದ ಅವರಿಗೆ ಮಾರ್ಗದರ್ಶನ ನೀಡಿ, ಆಮಿಷ ಒಡ್ಡಿ ಬೇರೆಡೆಗೆ ಕಳುಹಿಸಿದ್ದೀರಿ’ ಎಂದು ಆರೋಪಿಸಿದರು.