ನಮ್ಮ ಉದ್ದೇಶ ಬಡವರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತಾಗಬೇಕು ಎನ್ನುವುದು : ಸುಕುಮಾರ್ ಶೆಟ್ಟಿ -Vishwanews24
ಕುಂದಾಪುರ: ಕುಡಿಯುವ ನೀರು, ಅಂತರ್ಜಲಮಟ್ಟ ಏರಿಕೆ ದೃಷ್ಟಿಯಲ್ಲಿ ಪ್ರತೀ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿಂಡಿ ಅಣೆಕಟ್ಟು ಗುರುತಿಸಿ ಹೂಳೆತ್ತುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶೀಘ್ರವೇ ಗ್ರಾಪಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಶಾಸಕ ಬಿ.ಎಮ್. ಸುಕುಮಾರ್ ಶೆಟ್ಟಿ ಹೇಳಿದರು.
ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಬುಧವಾರ ನಡೆದ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಹೂಳೆತ್ತಲು ಪಂಚಾಯಿತಿ ಮೂಲಕ ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಕಾಮಗಾರಿಗೆ ಉಪಯೋಗಿಸಬಹುದಾದ ಹೂಳು ಯಾರ್ಡ್ನಲ್ಲಿ ಸಂಗ್ರಹಿಸಿ ಅಲ್ಲಿಂದ ಕಡಿಮೆ ಬೆಲೆ ವಿತರಿಸಬೇಕು. ಪ್ರತೀ ಯೂನಿಟ್ಗೆ ಎರಡು ಸಾವಿರ ಬೆಲೆ ನಿಗಧಿಪಡಿಸಬೇಕು. ಈ ರೀತಿ ಮಾಡಿದರೆ ಬಡವರಿಗೂ ಮನೆ ಕಟ್ಟಿಕೊಳ್ಳಲು ಕಡಿಮೆ ಬೆಲೆಯಲ್ಲಿ ಮರಳು ಸಿಕ್ಕಂತಾಗುತ್ತದೆ. ಈ ಪ್ರಕ್ರಿಯೆ ಆದಷ್ಟು ಬೇಗ ಆಯಾ ಪಂಚಾಯಿತಿಗಳಲ್ಲಿ ಜಾರಿಗೊಳಿಸಬೇಕು ಎಂದು ಸೂಚನೆ ನೀಡಿದರು.
ನಾಡ ಗ್ರಾಪಂ ಸೇರಿದಂತೆ ಹಲವೆಡೆ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಇದನ್ನು ನಾನು ಸಹಿಸಲ್ಲ. ಯಾರ್ಯಾರಿಗೋ ತಿನ್ನಲು ನಾನು ಬಿಡೋದಿಲ್ಲ. ಈ ಕೆಲಸ ಮುಂದೆ ನಡೆಯಬಾರದು. ನಮ್ಮ ಉದ್ದೇಶ ಬಡವರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತಾಗಬೇಕು ಎನ್ನುವುದು. ಎಲ್ಲೆಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆಯೋ ಮಾಹಿತಿ ಕಲೆ ಹಾಕಿ ಕೂಡಲೇ ಅದರ ವಿರುದ್ದ ಕ್ರಮಕೈಗೊಳ್ಳಿ ಎಂದು ಗಣಿ ಮತ್ತು ಭೂ ವಿಜ್ಙಾನ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಕುಂದರ್, ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ, ಬೈಂದೂರು ತಹಸೀಲ್ದಾರ್ ಬಸವರಾಜ್ ಪೂಜಾರ್, ಕುಂದಾಪುರ ತಾಲೂಕು ಪಂಚಾಯಿತಿ ಪ್ರಭಾರ ಇಒ ಡಾ. ನಾಗಭೂಷಣ್ ಉಡುಪ, ಬೈಂದೂರು ಇಓ ಭಾರತಿ, ಗಣಿ ಮತ್ತು ಭೂ ವಿಜ್ಙಾನ ಇಲಾಖೆಯ ಸಹಾಯಕ ನಿದೇರ್ಶಕ ರಾಮ್ ಜಿ ನಾಯ್ಕ್ ಇದ್ದರು.
