ನಾಯಕರು ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಿದ್ದಾರೆ, ಪಕ್ಷದ ಸಿದ್ಧಾಂತ ನಾಶವಾದರೆ, ನಾವೆಲ್ಲ ನಾಶವಾಗುತ್ತೇವೆ : ಮಲ್ಲಿಕಾರ್ಜುನ ಖರ್ಗೆ -Vishwanews24

Featured, ರಾಜ್ಯ ನ್ಯೂಸ್

ನಾಯಕರು ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಿದ್ದಾರೆ, ಪಕ್ಷದ ಸಿದ್ಧಾಂತ ನಾಶವಾದರೆ, ನಾವೆಲ್ಲ ನಾಶವಾಗುತ್ತೇವೆ : ಮಲ್ಲಿಕಾರ್ಜುನ ಖರ್ಗೆ -Vishwanews24

ಬೆಂಗಳೂರು: ಕಾಂಗ್ರೆಸ್ ನಾಯಕತ್ವದ ಕುರಿತು ರಾಷ್ಟ್ರಮಟ್ಟದಲ್ಲಿ ಅಪಸ್ವರ ಎದ್ದಿರುವ ಬೆನ್ನಲ್ಲೇ, ನಾಯಕತ್ವವನ್ನು ಟೀಕಿಸುತ್ತಿರುವ ಮುಖಂಡರ ವಿರುದ್ಧ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದು, ‘ಈ ನಾಯಕರು ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಿದ್ದಾರೆ’ ಎಂದು ಕಿಡಿ ಕಾರಿದ್ದಾರೆ.

‘ಪಕ್ಷದ ಕೆಲವು ನಾಯಕರು ಪಕ್ಷ ಮತ್ತು ನಮ್ಮ ನಾಯಕರ ವಿರುದ್ಧವೇ ಮಾತನಾಡಿರುವುದು ನೋವುಂಟು ಮಾಡಿದೆ’ ಕೆ‍ಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿಯವರ ಜನ್ಮದಿನದ ಕಾರ್ಯಕ್ರಮದಲ್ಲಿ ಹೇಳಿದರು.

‘ಒಂದು ಕಡೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಮ್ಮ ಬೆನ್ನ ಹಿಂದಿವೆ. ಇನ್ನೊಂದು ಕಡೆ ಆಂತರಿಕ ಭಿನ್ನಾಭಿಪ್ರಾಯ ಮತ್ತು ಕಿತ್ತಾಟ ನಡೆದಿದೆ. ಪಕ್ಷವನ್ನು ಆಂತರಿಕವಾಗಿ ದುರ್ಬಲಗೊಳಿಸುತ್ತಾ ಹೋದರೆ ನಾವು ಮುನ್ನಡೆಯಲು ಸಾಧ್ಯವಿಲ್ಲ. ಪಕ್ಷದ ಸಿದ್ಧಾಂತ ನಾಶವಾದರೆ, ನಾವೆಲ್ಲ ನಾಶವಾಗುತ್ತೇವೆ’ ಎಂದು ಎಚ್ಚರಿಸಿದರು.

ಬಿಹಾರ ಚುನಾವಣೆಯಲ್ಲಿ ಪಕ್ಷದ ಕಳಪೆ ಪ್ರದರ್ಶನದ ಕಾರಣ ನಾಯಕತ್ವದ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೇ ಖರ್ಗೆ ಅವರು ‘ಗಾಂಧಿ ಪರಿವಾರ’ವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.

‘ಗಾಂಧಿ ಪರಿವಾರ ಮತ್ತು ನಾಯಕತ್ವವನ್ನು ಟೀಕಿಸುತ್ತಿರುವವರು ತಾವಿರುವ ಪ್ರದೇಶದಲ್ಲಿ ಒಬ್ಬ ಕಾರ್ಪೋರೇಟರ್ ಅನ್ನು ಗೆಲ್ಲಿಸುವ ಶಕ್ತಿ ಹೊಂದಿಲ್ಲ. ಪಕ್ಷ ಸುಸ್ಥಿತಿಯಲ್ಲಿ ಇದ್ದಾಗ ಎಲ್ಲರೂ ಹೊಗಳುತ್ತಾರೆ. ಸೋತಾಗ ಅದಕ್ಕೆ ರಾಹುಲ್‌ ಗಾಂಧಿ, ಸೋನಿಯಾಗಾಂಧಿ ಕಾರಣರೆಂದು ಗೂಬೆ ಕೂರಿಸುತ್ತಾರೆ’ ಎಂದರು.