ನ್ಯೂಜಿಲೆಂಡ್ ಕ್ರೈಸ್ಟ್ಚರ್ಚ್ನ ಮಸೀದಿಯಲ್ಲಿ ಗುಂಡಿನ ದಾಳಿ : ಅದೃಷ್ಟವಶಾತ್ ಪಾರಾದ ಬಾಂಗ್ಲಾ ಕ್ರಿಕೆಟ್ ಟೀಮ್ – Vishwanews24
ವೆಲ್ಲಿಂಗ್ಟನ್: ನ್ಯೂಜಿಲೆಂಡ್ನ ಕ್ರಿಸ್ಟ್ ಚರ್ಚ್ ನಗರದ 2 ಮಸೀದಿಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಬಾಂಗ್ಲಾದೇಶದ ಕ್ರಿಕೆಟ್ ಟೀಂ ಪ್ರಾಣಾಪಾಯದಿಂದ ಪಾರಾಗಿದೆ.
ಬಾಂಗ್ಲಾದೇಶದ ಕ್ರಿಕೆಟ್ ತಂಡ ಶನಿವಾರ ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಬೇಕಿತ್ತು. ಬಾಂಗ್ಲಾದೇಶದ ಕ್ರಿಕೆಟ್ ಆಟಗಾರರು ನಮಾಜ್ ಮಾಡಲು ಹೋಟೆಲ್ನಿಂದ ಹಾಗ್ಲೇ ಓವೆಲ್ ಸ್ಟೇಡಿಯಂ ಬಳಿಯಿರುವ ಮಸೀದಿಗೆ ಹೊರಟ್ಟಿದ್ದರು. ಈ ವೇಳೆ ಅಲ್ಲಿ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗುತ್ತಿದ್ದು, ಓರ್ವ ಮುಸುಕುಧಾರಿಯನ್ನು ವಶಕ್ಕೆ ಪಡೆಯಲಾಗಿದೆ.
ಮಸ್ಜಿದ್ ಅಲ್ ನೂರ್ ಮಸೀದಿ ಪಕ್ಕದಲ್ಲೇ ಮತ್ತೊಂದು ಮಸೀದಿ ಇದ್ದು, ಶುಕ್ರವಾರದ ಪ್ರಾರ್ಥನೆಗಾಗಿ ಈ ಮಸೀದಿಯಲ್ಲೂ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು ಎನ್ನಲಾಗಿದೆ. ಆದರೆ ಮಸ್ಜಿದ್ ಅಲ್ ನೂರ್ ಮಸೀದಿಯಲ್ಲಿ ಗುಂಡಿನ ದಾಳಿ ಆರಂಭವಾಗುತ್ತಲೇ, ಈ ಮಸೀದಿಯಲ್ಲಿದ್ದ ಜನರನ್ನು ಪೊಲೀಸರು ಸುರಕ್ಷಿತವಾಗಿ ತೆರವುಗೊಳಿಸಿದರು ಎನ್ನಲಾಗಿದೆ.
ಈ ಬಗ್ಗೆ ಬಾಂಗ್ಲಾದೇಶದ ಕ್ರಿಕೆಟ್ ಬೋರ್ಡ್ ತನ್ನ ಟ್ವಿಟ್ಟರಿನಲ್ಲಿ, “ನ್ಯೂಜಿಲೆಂಡ್ನ ಕ್ರೈಸ್ಟ್ ಚರ್ಚ್ ನಲ್ಲಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡದ ಎಲ್ಲ ಆಟಗಾರರು ಗುಂಡಿನ ದಾಳಿ ಘಟನೆ ನಡೆದ ನಂತರ ಸುರಕ್ಷಿತವಾಗಿ ಹೋಟೆಲ್ಗೆ ತೆರಳಿದ್ದಾರೆ. ಬಾಂಗ್ಲಾದೇಶದ ಕ್ರಿಕೆಟ್ ತಂಡದ ಜೊತೆ ನಾವು ಸಂಪರ್ಕದಲ್ಲಿದ್ದೇವೆ” ಎಂದು ಟ್ವೀಟ್ ಮಾಡಿದೆ.
ಮಸ್ಜಿದ್ ಅಲ್ ನೂರ್ ಮಸೀದಿಯಲ್ಲಿ ಗುಂಡಿನ ದಾಳಿ ನಡೆಸುತ್ತಿರುವ ಬಂದೂಕುಧಾರಿ ಮಿಲಿಟರಿ ಸಮವಸ್ತ್ರ ತೊಟ್ಟು, ಮಸೀದಿಯ ಒಳಪ್ರವೇಶಿಸಿದ್ದಾನೆ. ಬಳಿಕ ಪ್ರಾರ್ಥನೆ ಮಾಡುವವನಂತೆ ನಟಿಸುತ್ತಾ ಹಠಾತ್ತನೆ ಗುಂಡಿನ ದಾಳಿ ಆರಂಭಿಸಿದ್ದಾಗಿ ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದಾರೆ.
