ಪಂಚರಾಜ್ಯಗಳ ಚುನಾವಣೆ ಫಲಿತಂಶದಿಂದ ಪ್ರಧಾನಿ ಮೋದಿ ಅವರ ವರ್ಚಸ್ಸು ಕಡಿಮೆಯಾಗಲ್ಲ: ಬಿಜೆಪಿ ಶಾಸಕ ಸಿ.ಟಿ. ರವಿ
ಬೆಳಗಾವಿ : ಪಂಚರಾಜ್ಯಗಳ ಚುನಾವಣೆ ಫಲಿತಂಶದಿಂದ ಪ್ರಧಾನಿ ಮೋದಿ ಅವರ ವರ್ಚಸ್ಸು ಕಡಿಮೆಯಾಗಲ್ಲ. ನಾವು ಎಚ್ಚರದಿಂದ ಇರುವುದಕ್ಕೆ ಜನ ಈ ತೀರ್ಪು ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಸಿ.ಟಿ. ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಮೋದಿ ಪ್ರಸಿದ್ಧಿ ಎಲ್ಲೂ ಕಡಿಮೆಯಾಗಿಲ್ಲ, 2019ರ ಚುನಾವಣೆಯನ್ನ ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಕ್ಕೆ ಜನ ತೀರ್ಪು ಕೊಟ್ಟಿದ್ದಾರೆ. ಇದನ್ನು ಎಚ್ಚರಿಕೆ ಗಂಟೆಯಾಗಿ ತೆಗೆದುಕೊಂಡು ಮೋದಿ ನೇತೃತ್ವದಲ್ಲಿ ಮುಂದಿನ ಚುನಾವಣೆ ಗೆದ್ದು, ಭಾರತವನ್ನ ಮುನ್ನಡೆಸುತ್ತೇವೆ ಎಂದಿದ್ದಾರೆ.
ಸುವರ್ಣಸೌಧದಲ್ಲಿ ಮಾತನಾಡಿದ ಅವರು, ಹಿಂದುತ್ವ ಎನ್ನುವ ನಾಟಕವಾಡಿ ಕಾಂಗ್ರೆಸ್ ಮತ ಗಳಿಸಿದೆ. ಮಧ್ಯಪ್ರದೇಶದಲ್ಲಿ ಸಮಲಬಲದ ಹೋರಾಟ ನಡೆದಿದೆ. ರಾಜಸ್ಥಾನ, ಛತ್ತೀಸಗಢದಲ್ಲಿ ಹಿನ್ನಡೆಯಾಗಿದೆ. ಈ ಹಿಂದಿನ ವಿಭಜನೆ ತಂತ್ರ ಕೆಲಸ ಮಾಡಿದೆ ಎಂದು ಹೇಳಿದರು.
ಕಾಂಗ್ರೆಸ್ ಈ ಚುನಾವಣೆಯಲ್ಲಿ ಹಿಂದುತ್ವ ವಿಭಜಿಸುವ ಕೆಲಸ ಮಾಡಿದೆ. ಇವರ ಹಿಂದುತ್ವ ಹಾಗೂ ಗೋತ್ರ ರಾಜಕಾರಣ ಪರ್ಮನೆಂಟ್ ಇರುತ್ತಾ ನೋಡೋಣ, ಲೋಕಸಭಾ ಚುನಾವಣೆ ದೃಷ್ಟಿಯಿಂದ ನಾವು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.
