ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

Featured, ರಾಜ್ಯ ನ್ಯೂಸ್

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ

8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು

ಬೆಂಗಳೂರು: ನಗರದ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜನವರಿ ತಿಂಗಳಿನಲ್ಲಿ ನಡೆದಿದ್ದ ಇಬ್ಬರು ವಿದ್ಯಾರ್ಥಿನಿಯರ ನಿಗೂಢ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರ ಈಗ ಅಪರಾಧ ತನಿಖಾ ಇಲಾಖೆಗೆ (CID) ಒಪ್ಪಿಸಿದೆ. ಘಟನೆ ನಡೆದು ಎಂಟು ತಿಂಗಳು ಕಳೆದರೂ ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ತನಿಷ್ಕಾ ಹಾಗೂ ಆಕೆಯ ಜ್ಯೂನಿಯರ್ ತೇಜಸ್ವಿನಿ ಕಳೆದ ಜನವರಿ 31 ರಂದು ನಿಗೂಢವಾಗಿ ನಾಪತ್ತೆಯಾಗಿದ್ದರು. ಅಂದು ಮನೆಯಿಂದ ಹೊರಟಿದ್ದ ಇಬ್ಬರು ವಿದ್ಯಾರ್ಥಿನಿಯರು ವಾಪಸ್ ಬಂದಿರಲಿಲ್ಲ. ಆತಂಕಗೊಂಡ ಪೋಷಕರು ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ವಿಶೇಷವೆಂದರೆ ವಿದ್ಯಾರ್ಥಿನಿಯರು ಹೋಗುವಾಗ ತಮ್ಮ ಆಧಾರ್ ಕಾರ್ಡ್‌ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದರು. ಆದರೆ ಪೊಲೀಸರ ತನಿಖೆಯ ವೇಳೆ ಅವರು ಯಾವುದೇ ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್‌ಗಳನ್ನು ಬಳಸುತ್ತಿಲ್ಲ ಎಂಬುದು ತಿಳಿದುಬಂದಿದೆ. ಅಷ್ಟೇ ಅಲ್ಲದೆ ಕಳೆದ ಎಂಟು ತಿಂಗಳಿನಿಂದ ಅವರು ತಮ್ಮ ಯಾವುದೇ ಸ್ನೇಹಿತರು ಅಥವಾ ಕುಟುಂಬ ಸದಸ್ಯರನ್ನು ಸಂಪರ್ಕಿಸಿಲ್ಲ.

ಇದನ್ನೂ ಓದಿ: 

ಶಾಲೆಗಳಲ್ಲಿ ಅಶ್ಲೀಲ ಹಾಡು, ನೃತ್ಯಕ್ಕೆ ಶಿಕ್ಷಣ ಇಲಾಖೆ ನಿಷೇಧ; ಹೊಸ ಮಾರ್ಗಸೂಚಿ ಪ್ರಕಟ, ಅಧಿಕೃತ ಆದೇಶ – vishwanews24

ದೂರು ದಾಖಲಾದ ತಕ್ಷಣ ಕಾರ್ಯಪ್ರವೃತ್ತರಾಗಿದ್ದ ಪೊಲೀಸರು, ತನಿಖೆಯ ಆರಂಭದಲ್ಲಿ ವಿದ್ಯಾರ್ಥಿನಿಯರು ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿದ್ದ ಸುಳಿವನ್ನು ಪತ್ತೆಹಚ್ಚಿದ್ದರು. ಆನಂತರ ವಿದ್ಯಾರಣ್ಯಪುರ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿ ಮುಂಬೈ, ಚೆನ್ನೈ, ಕೊಯಮತ್ತೂರು, ದೆಹಲಿ, ಕಾಶಿ, ಕೇರಳ, ಚಾಮರಾಜನಗರ ಹಾಗೂ ಮೈಸೂರು ಸೇರಿದಂತೆ ದೇಶದ ಸುಮಾರು 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ಹುಡುಕಾಟ ನಡೆಸಿದ್ದರು. ಆದರೂ, ವಿದ್ಯಾರ್ಥಿನಿಯರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಲಿಲ್ಲ.

ಸ್ಥಳೀಯ ಪೊಲೀಸರ ತನಿಖೆಯಿಂದ ಸಮಾಧಾನಗೊಳ್ಳದ ವಿದ್ಯಾರ್ಥಿನಿಯರ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಹ ಸಲ್ಲಿಸಿದ್ದರು. ಆದರೂ ಫಲಿತಾಂಶ ಶೂನ್ಯವಾಗಿದ್ದರಿಂದ, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಪೋಷಕರು ಒತ್ತಾಯಿಸಿದ್ದರು. ಸದ್ಯದ ಪರಿಸ್ಥಿತಿಯನ್ನು ಪರಿಗಣಿಸಿದ ಸರ್ಕಾರ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿದೆ.

ಇದನ್ನೂ ಓದಿ: 

ಮೇ 1 ರಿಂದ LPG ನಿಯಮಗಳಲ್ಲಿ ಭಾರೀ ಬದಲಾವಣೆ – vishwanews24

ಈಗಾಗಲೇ ವಿದ್ಯಾರಣ್ಯಪುರ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಕಡತಗಳು ಮತ್ತು ಮಹತ್ವದ ದಾಖಲೆಗಳನ್ನು ಸಿಐಡಿ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ. ಈಗ ಸಿಐಡಿಯ ವಿಶೇಷ ತಂಡವು ಈ ನಿಗೂಢ ನಾಪತ್ತೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದೆ.

Leave a Reply