ಪುತ್ರ ವ್ಯಾಮೋಹದಿಂದ ಕಾಂಗ್ರೆಸ್‌ ಹಾಳಾಗುತ್ತಿದೆ : ಗುತ್ತೇದಾರ್‌

Featured, ರಾಜ್ಯ ನ್ಯೂಸ್
ಬೆಂಗಳೂರು: ಪುತ್ರ ವ್ಯಾಮೋಹದಿಂದಾಗಿ ಕಾಂಗ್ರೆಸ್‌ ಹಾಳಾಗುತ್ತಿದ್ದು, ಕೌರವರ ವಧೆಯಾಗಲಿದೆ. ಕಾಂಗ್ರೆಸ್‌ಗೆ ಇನ್ನೂ ದೊಡ್ಡ ಶಾಕ್‌ ಕಾದಿದೆ ಎಂದು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಲಿರುವ ಶಾಸಕ ಮಾಲೀಕಯ್ಯ ಗುತ್ತೇದಾರ್‌ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸೋಮವಾರ ನಿವಾಸದಲ್ಲಿ ಭೇಟಿ ಮಾಡಿ ಚರ್ಚಿಸಿದ ಬಳಿಕ ಮಾತನಾಡಿದ ಮಾಲೀಕಯ್ಯ ಗುತ್ತೇದಾರ್‌, ಅಂದು ಧೃತರಾಷ್ಟ್ರ ಪ್ರೇಮದಿಂದ ದುರ್ಯೋಧನನಿಗೆ ಪಟ್ಟ. ಅದೇರೀತಿ ಮಲ್ಲಿಕಾರ್ಜುನ ಖರ್ಗೆ ಅವರು ಪುತ್ರ ವ್ಯಾಮೋಹದಿಂದ ಮಗನಿಗೆ ಅಧಿಕಾರ ಕೊಡಿಸಿದ್ದಾರೆ. ಜನರು ಈ ಬಗ್ಗೆ ನಿರ್ಧರಿಸಲಿದ್ದು, ಯಾರನ್ನು ಗೆಲ್ಲಿಸುತ್ತಾರೆ, ಯಾರನ್ನು ಸೋಲಿಸುತ್ತಾರೆ ಎಂಬುದನ್ನು ನೋಡೋಣ ಎಂದರು.

ಕಾಂಗ್ರೆಸ್‌ಗೆ ಇನ್ನು ದೊಡ್ಡ ಶಾಕ್‌ ಇದೆ. ಅಂಬರೀಶ್‌ ಅವರು ಯಾವ ಲಿಸ್ಟ್‌ನಲ್ಲಿ ಇದ್ದಾರೋ ಗೊತ್ತಿಲ್ಲ. ಅಂಬರೀಶ್‌ ಅವರ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಅವರಿಗಿದೆ. ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಕಡೆಗಣಿಸಲಾಗಿದೆ. ಏ.8ರಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸಮ್ಮುಖದಲ್ಲಿ ನಾನು ಸೇರಿದಂತೆ ಇನ್ನಷ್ಟು ಕಾಂಗ್ರೆಸ್‌ ಮುಖಂಡರು ಬಿಜೆಪಿ ಸೇರಲಿದ್ದೇವೆ ಎಂದು ಹೇಳಿದರು.

ಜೆಡಿಎಸ್‌ ಶಾಸಕ ಮಲ್ಲಿಕಾರ್ಜುನ ಖೂಬಾ, ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಬಸವರಾಜ ಪಾಟೀಲ್‌ ಅನ್ವರಿ ಅವರು ಏ.8ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.