ಪುನೀತ್ ರಾಜ್ ಕುಮಾರ್ ಕಾರು ಅಪಘಾತ : ಪ್ರಾಣಾಪಾಯದಿಂದ ಪಾರಾದ ನಟಸಾರ್ವಭೌಮ
ಅನಂತಪುರ : ನಟ ಸಾರ್ವಭೌಮ ಸಿನಿಮಾ ಚಿತ್ರೀಕರಣ ಮುಗಿಸಿ ಬಳ್ಳಾರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ವೇಳೆ ನಟ ಪುನೀತ್ ರಾಜ್ ಕುಮಾರ್ ಅವರ ಕಾರು ಗುರುವಾರ ರಾತ್ರಿ ಅಪಘಾತಕ್ಕೊಳಗಾಗಿದ್ದು, ಅದೃಷ್ಟವಶಾತ್ ಪುನೀತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಬಳಿ ಕಾರಿನ ಟೈರ್ ಸ್ಫೋಟಗೊಂಡು ಮತ್ತೊಂದು ಕಾರಿಗೆ ಪುನೀತ್ ಅವರಿದ್ದ ಕಾರು ಡಿಕ್ಕಿ ಹೊಡೆದಿದೆ. ಪುನೀತ್ ರಾಜ್ ಕುಮಾರ್ ಹಾಗೂ ಸ್ನೇಹಿತರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪುನೀತ್ ರಾಜ್ ಕುಮಾರ್ ಜೊತೆ ಗನ್ ಮ್ಯಾನ್ ಹಾಗೂ ಕಾರಿನ ಚಾಲಕರಿದ್ದರು ಎಂದು ತಿಳಿದುಬಂದಿದೆ. ಈ ಘಟನೆ ನಂತರ ಪುನೀತ್ ಮತ್ತು ಸ್ನೇಹಿತರು ಅದೇ ಮಾರ್ಗದಲ್ಲಿ ಬರುತ್ತಿದ್ದ ಪರಿಚಯಸ್ಥರೊಬ್ಬರ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದಾರೆ ಎಂದು ಏನ್‌ಸುದ್ದಿಗೆ ಮೂಲಗಳು ತಿಳಿಸಿವೆ.
ಇನ್ನು ಮನೆಗೆ ತಲುಪಿದ ಅಪ್ಪು ತಮ್ಮ ಕಾರು ಅಪಘಾತಕ್ಕೊಳಗಾಗಿದ್ದು ತಾನು ಸುರಕ್ಷಿತವಾಗಿರುವುದಾಗಿ ಫೇಸ್ ಬುಕ್ ನಲ್ಲಿ ಸ್ಟೇಟರ್ ಅಪ್ ಡೇಟ್ ಮಾಡಿದ್ದಾರೆ.

