ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಅಯಥ್ಲೀಟಿಕ್ ಕೋಚ್ ಪುರುಷೋತ್ತಮ ರೈ ಪ್ರಶಸ್ತಿ ಸ್ವೀಕರಿಸುವ ಒಂದು ದಿನ ಮುನ್ನ ಹೃದಯಾಘಾತದಿಂದ ವಿಧಿವಶ -Vishwanews24
ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಹಿರಿಯ ಅಯಥ್ಲೀಟಿಕ್ ಕೋಚ್ ಪುರುಷೋತ್ತಮ ರೈ ಪ್ರಶಸ್ತಿ ಸ್ವೀಕರಿಸುವ ಒಂದು ದಿನ ಮುನ್ನ ಹೃದಯಾಘಾತದಿಂದ ವಿಧಿವಶ -Vishwanews24
ಬೆಂಗಳೂರು : ಕ್ರೀಡಾಕ್ಷೇತ್ರದ ಅತ್ಯುತ್ತಮ ದ್ರೋಣಾಚಾರ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಕರ್ನಾಟಕದ ಹಿರಿಯ ಅಯಥ್ಲೀಟಿಕ್ ಕೋಚ್ ಪುರುಷೋತ್ತಮ ರೈ ಪ್ರಶಸ್ತಿ ಸ್ವೀಕರಿಸುವ ಒಂದು ದಿನ ಮುನ್ನ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಇತ್ತೀಚೆಗಷ್ಟೇ ಘೋಷಣೆಯಾದ ಕ್ರೀಡಾ ಪ್ರಶಸ್ತಿಯಲ್ಲಿ ಪುರುಷೋತ್ತಮ್ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಭಾಜನರಾಗಿದ್ದರು. ಆದರೆ ಪ್ರಶಸ್ತಿ ಸ್ವೀಕರಿಸುವ ಮುನ್ನವೇ ಅವರು ವಿಧಿವಶರಾಗಿದ್ದಾರೆ.
ಜೀವಮಾನದ ಸಾಧನೆಗಾಗಿ ಪುರುಷೋತ್ತಮ್ ರೈ ಅವರು ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗಿದ್ದರು. 79 ವರ್ಷ ವಯಸ್ಸಿನ ಪುರುಷೋತ್ತಮ ರೈ ಸಾವಿರಾರು ಕ್ರೀಡಾಪಟುಗಳನ್ನು ರೂಪಿಸಿದ್ದರು. ಭಾನುವಾರ ನಡೆಯಲಿರುವ ವರ್ಚುವಲ್ ಕಾರ್ಯಕ್ರಮದಲ್ಲಿ ಪುರುಷೋತ್ತಮ ರೈ ಅವರು ರಾಷ್ಟ್ರಪತಿಗಳಿಂದ ಪ್ರಶಸ್ತಿಯನ್ನು ಸ್ವೀಕರಿಸಬೇಕಾಗಿತ್ತು. ‘ಅವರು ರಾಷ್ಟ್ರ ಪ್ರಶಸ್ತಿಯ ಪಡೆಯುವ ಸಲುವಾಗಿ ಅದರ ಪೂರ್ವ ತಯಾರಿಯಲ್ಲಿ ಭಾಗಿಯಾಗಿದ್ದರು. ಆದರೆ ಅದಾದ ಬಳಿಕ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ’ ಎಂದು ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ಭಾರತದ ಜನಪ್ರಿಯ ಅಥ್ಲೀಟ್ಗಳಾಗಿ ಖ್ಯಾತರಾದ ಅಶ್ವಿನಿ ನಾಚಪ್ಪ, ಮುರಳಿ ಕುಟ್ಟನ್, ರೋಸ ಕುಟ್ಟಿ ಸೇರಿದಂತೆ ಅನೇಕ ಅಥ್ಲೀಟ್ಗಳಿಗೆ ಪುರುಷೋತ್ತಮ್ ರೈ ತರಭೇತಿ ನೀಡಿದ್ದರು. ಪುರುಷೋತ್ತಮ್ ರೈ ಅವರು 2001ರಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(SAI) ಕೋಚ್ ಹುದ್ದೆಯಿಂದ ನಿವೃತ್ತರಾದರು. ಇವರ ಸಾಧನೆಗಾಗಿ ಅವರಿಗೆ ದ್ರೋಣಾಚಾರ್ಯ ಪ್ರಶಸ್ತಿ ಒಲಿದು ಬಂದಿತ್ತು.
