ಪ್ರಧಾನಿಯಿಂದ ವಿಶ್ವದ ಅತ್ಯಂತ ಎತ್ತರದ ಉಕ್ಕಿನ ಮನುಷ್ಯ ಸರ್ದಾರ್​ ಪಟೇಲರ ‘ಏಕತಾ ಪ್ರತಿಮೆ’ ಲೋಕಾರ್ಪಣೆ

Featured, ದೇಶ

ಕೆವಾಡಿಯಾ: ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಗಳಲ್ಲಿ ಒಂದಾದ ಸರ್ದಾರ್ ವಲ್ಲಭ ಭಾಯ್ ಪಟೇಲ್‌ ರ ‘ಏಕತಾ ಪ್ರತಿಮೆ’ ಲೋಕಾರ್ಪಣೆಗೊಂಡಿದೆ. ಪ್ರಧಾನಿ ಮೋದಿ ಪ್ರತಿಮೆ ಅನಾವರಣಗೊಳಿಸಿದರು.

ಗುಜರಾತ್‍ನ ಕೆವಾಡಿಯಾ ಬಳಿ ಸರ್ದಾರ್ ಪಟೇಲರ ಅತಿ ಎತ್ತರದ ಪ್ರತಿಮೆ ಅನಾವರಣಗೊಂಡಿತು. ನರ್ಮದಾ ತಟದಲ್ಲಿ ನಿರ್ಮಿಸಲಾಗಿರುವ ಈ ಪ್ರತಿಮೆಯು ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬ ಕೀರ್ತಿಗೆ ಭಾಜನವಾಗಿದ್ದು, ಪ್ರತಿಮೆ 182 ಮೀಟರ್‌ ಎತ್ತರ ಹೊಂದಿದೆ. ಈ ಮೂಲಕ ದೇಶದ ‘ಏಕತೆಯ ಹರಿಕಾರ’ನಿಗೆ ಗೌರವ ಸಮರ್ಪಿಸಲಾಗಿದೆ.ದೇಶದ ಮೊದಲ ಉಪ ಪ್ರಧಾನಿ ಪಟೇಲ್‌ ಅವರು ಭಾರತದ ಏಕೀಕರಣದಲ್ಲಿ ನಿರ್ಣಾಯಕ ಪಾತ್ರವಹಿಸಿದ್ದರು. ಹೀಗಾಗಿ ಪ್ರತಿಮೆಗೆ ‘ಏಕತೆಯ ಪ್ರತಿಮೆ’ ಎಂದು ನಾಮಕರಣ ಮಾಡಲಾಗಿದೆ. ಸರ್ದಾರ್‌ ಪಟೇಲ್‌ ಅವರ ಪ್ರತಿಮೆಯ ಮೂಲಕ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ‘ಏಕೀಕರಣ’ದ ಸಂದೇಶ ಸಾರಲು ಮುಂದಾಗಿದ್ದಾರೆ.

ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಗುಜರಾತ್​ ಮುಖ್ಯಮಂತ್ರಿ ವಿಜಯ್​ ರೂಪಾಣಿ, ಉಪ ಮುಖ್ಯಮಂತ್ರಿ ನಿತಿನ್​ ಪಟೇಲ್​, ಮಧ್ಯ ಪ್ರದೇಶ ರಾಜ್ಯಪಾಲ ಆನಂದಿಬೆನ್​ ಪಟೇಲ್​ ಮುಂತಾದವರು ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.