ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಶಕ್ತಿಯಾಗಿ ನಿಂತಿದ್ದಾರೆ : ಬಿಜೆಪಿ ನಾಯಕಿ ಶೃತಿ – Vishwanews24
ಹಾಸನ:ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಮುನ್ನಡೆಸುವ ಶಕ್ತಿಯಾಗಿ ನಿಂತಿದ್ದಾರೆ ಎಂದು ನಟಿ, ಬಿಜೆಪಿ ನಾಯಕಿ ಶೃತಿ ತಿಳಿಸಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇದು ದೇಶದ ಚುನಾವಣೆ, ಮೋದಿ ಅವರ ಮರು ಆಯ್ಕೆಯನ್ನು ಅನೇಕರು ಬಯಸಿದ್ದಾರೆ. ಮೋದಿ ಅಲೆ ಕಡಿಮೆಯಾಗಿದೆ ಎನ್ನುವುದು ಸುಳ್ಳು. 2014ರಲ್ಲಿದ್ದ ಅಲೆಗಿಂತ ಈ ಬಾರಿ ದೇಶದಲ್ಲಿ ಮೋದಿ ಪರ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿದೆ.
ಕರ್ನಾಟಕದಲ್ಲಿ ಡಾ.ರಾಜಕುಮಾರ್ ಹೆಸರು ಹೇಗೆ ಶಕ್ತಿಯೋ ಹಾಗೇ ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರು ಕೂಡ ಒಂದು ಬಲಿಷ್ಠ ಶಕ್ತಿ. ಮೋದಿ ಹೆಸರಲ್ಲೇ ಮೋಡಿ ಇದೆ. ಹೀಗಾಗಿ ನಾವು ಮೋದಿ ಹೆಸರನ್ನು ಎಲ್ಲೆಡೆ ಚಲಾವಣೆ ಮಾಡುತ್ತಿದ್ದೇವೆ. ಮೋದಿ ಅವರು ಪ್ರಧಾನಿಯಾದ ಮೇಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶ ಬಹಳಷ್ಟು ಮುಂದೆ ಬಂದಿದೆ. ಜಗತ್ತಿನಲ್ಲಿರುವ ಪ್ರಭಾವಿ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಅವರೇ ಮೊದಲ ಸ್ಥಾನ ಪಡೆದಿದ್ದಾರೆ ಎಂದು ಪ್ರಧಾನಿಯ ನಾಮ ಬಲ ಗುಣಗಾನ ಮಾಡಿದರು.
ದೇಶದ ಸರ್ವಾಂಗೀಣ ಅಭಿವೃದ್ಧಿಗೆ 5 ವರ್ಷ ಸಾಲದು, ಮತ್ತೈದು ವರ್ಷ ಬೇಕು. ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದರು. ಹಾಗೆಯೇ ರಾಜ್ಯದಲ್ಲಿ ಯಡಿಯೂರಪ್ಪ ಅವರು ಮತ್ತೆ ಸಿಎಂ ಆಗುವುದು ನನಗೂ ಖುಷಿ ವಿಷಯ ಎಂದು ಅಭಿಪ್ರಾಯ ತಿಳಿಸಿದರು.
