ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಭಸ್ಮಾಸುರ : ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ -Vishwanews24
ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಭಸ್ಮಾಸುರ : ಕಾಂಗ್ರೆಸ್ ಮುಖಂಡ ವಿ.ಎಸ್ ಉಗ್ರಪ್ಪ -Vishwanews24
ಬಳ್ಳಾರಿ: “ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಅವರು ಇಂದು ಅಧೋಗತಿಯತ್ತ ಸಾಗಿಸುತ್ತಿದ್ದಾರೆ. ರೈತಪರ ಹಾಗೂ ಜನಪರ ಕಾನೂನುಗಳನ್ನು ಜನವಿರೋಧಿಯಾಗಿ ಮಾರ್ಪಾಡು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ಆಧುನಿಕ ಭಸ್ಮಾಸುರ” ಎಂದು ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಹೇಳಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಠಿ ಮಾಡುವುದಾಗಿ ಹೇಳಿದ್ದರು. ಆದರೆ, ಅವರು ನೀಡಿರುವ ಭರವಸೆ ಈಡೇರಿಲ್ಲ. ನೋಟಿ ರದ್ಧತಿಯಿಂದ ಕಪ್ಪು ಹಣದ ಪತ್ತೆ ಕಾರ್ಯವೂ ಆಗಿಲ್ಲ” ಎಂದಿದ್ದಾರೆ.
ಇಂದಿರಾಗಾಂಧಿಯವರ ಅವಧಿಯಲ್ಲಿ ಭೂ ಸುಧಾರಣಾ ಕಾಯ್ದೆಯನ್ನು ಜಾರಿಗೆ ತಂದು ರಾಜ್ಯದ ಸಾವಿರಾರು ರೈತರ ಬದುಕನ್ನು ಕಾಂಗ್ರೆಸ್ ಸರ್ಕಾರ ಉತ್ತಮಪಡಿಸಿತ್ತು. ಆದರೆ ಈಗ ಕೃಷಿ, ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಪ್ರಧಾನಿ ಮೋದಿ ರೈತರ ಬದುಕಿನ ಮೇಲೆ ಮರಣ ಶಾಸನ ಬರೆದಿದೆ. ಇಂಥ ಅಮಾನವೀಯ ನಿರ್ಧಾರಗಳ ವಿರುದ್ಧ ದೇಶದಲ್ಲಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಲಿದೆ. ಅದರ ಸೂಚನೆಯು ದೆಹಲಿ ಮುಷ್ಕರದಲ್ಲೇ ದೊರಕಿದೆ. ನೂರಾರು ರೈತ ಸಂಘಟನೆಗಳು ಮತ್ತು 21 ರಾಜಕೀಯ ಪಕ್ಷಗಳು ನೇತೃತ್ವ ವಹಿಸಿರುವ ಹೋರಾಟದ ಕಾವು ದೇಶದಾದ್ಯಂತ ಹಬ್ಬಿದೆ’ ಎಂದರು.
‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಜನವಿರೋಧಿ ನೀತಿಗಳನ್ನೇ ಜಾರಿಗೆ ತರುತ್ತಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಮೋದಿ ದಾರಿಯಲ್ಲೇ ರೈತರ ವಿರೋಧಿ ಕಾಯ್ದೆಗಳ ಜಾರಿಗೆ ಮುಂದಾಗಿದ್ದಾರೆ. ಭೂ ಸುಧಾರಣೆ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಕೃಷಿ ಜಮೀನುಗಳ ಮಾರಾಟಕ್ಕೆ ಇದ್ದ ಎಲ್ಲ ತಡೆಗಳನ್ನೂ ತೆರವುಗೊಳಿಸಿದ್ದಾರೆ’ ಎಂದು ಆರೋಪಿಸಿದರು.
