ಪ್ರಧಾನಿ ಮೋದಿಯಿಂದ ದೀಪಾವಳಿಗೆ ಬಂಪರ್‌ ಉಡುಗೊರೆ

Featured, ರಾಷ್ಟ್ರ ನ್ಯೂಸ್

ನವದೆಹಲಿಕೃಷಿ ಹೊರತುಪಡಿಸಿದರೆ ದೇಶದಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಎರಡನೇ ಅತಿದೊಡ್ಡ ವಲಯವಾಗಿರುವ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ವಲಯ (ಎಂಎಸ್‌ಎಂಇ)ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಉಡುಗೊರೆ ನೀಡಿದ್ದಾರೆ. ಹೆಚ್ಚಿನ ಉದ್ಯೋಗ ಸೃಷ್ಟಿಮತ್ತು ಎಂಎಸ್‌ಎಂಇಗಳಿಗೆ ನೆರವಾಗುವ ನಿಟ್ಟಿನಲ್ಲಿ ಕೇವಲ 59 ನಿಮಿಷಗಳಲ್ಲೇ ಸಾಲ ಒದಗಿಸುವುದೂ ಸೇರಿದಂತೆ 12 ಹೊಸ ಯೋಜನೆಗಳನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಅತಿಸಣ್ಣ, ಸಣ್ಣ ಮತ್ತು ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಬೆಂಬಲ ಮತ್ತು ನೆರವು ನೀಡುವ ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಮೋದಿ, ಜಿಎಸ್‌ಟಿ ನೊಂದಾಯಿತ ಎಂಎಸ್‌ಎಂಇಗಳಿಗೆ www.psbloanin59min.com ಮೂಲಕ ಕೇವಲ 59 ನಿಮಿಷಗಳಲ್ಲೇ 1 ಕೋಟಿ ರು.ವರೆಗೂ ಸಾಲ ನೀಡಲಾಗುವುದು. ಜೊತೆಗೆ 1 ಕೋಟಿ ರು.ವರೆಗಿನ ಸಾಲಕ್ಕೆ ಶೇ.2ರಷ್ಟುಬಡ್ಡಿ ಸಬ್ಸಿಡಿ ನೀಡಲಾಗುವುದು, ಇದಲ್ಲದೇ ಪ್ರೀ ಶಿಪ್‌ಮೆಂಟ್‌ ಮತ್ತು ಪೋಸ್ಟ್‌ ಶಿಪ್‌ಮೆಂಟ್‌ ಸಾಲಕ್ಕೆ ನೀಡಲಾಗುತ್ತಿದ್ದ ಶೇ.3ರಷ್ಟುಬಡ್ಡಿ ರಿಯಾಯಿತಿಯನ್ನು ಶೇ.5ಕ್ಕೆ ಹೆಚ್ಚಿಸಲಾಗುವುದು ಎಂದು ಪ್ರಕಟಿಸಿದರು.

ಇದಲ್ಲದೆ ವಲಯದಲ್ಲಿನ ಇನ್ಸ್‌ಪೆಕ್ಟರ್‌ ರಾಜ್‌ ನೀತಿಗೆ ಬ್ರೇಕ್‌ ಹಾಕಲು ಸರ್ಕಾರ ಮಹತ್ವದ ನಿರ್ಧಾರ, ಕೈಗೊಂಡಿದೆ. ಇನ್ನು ಮುಂದೆ ಯಾವ ಕಾರ್ಖಾನೆಗಳಿಗೆ ಯಾವ ಅಧಿಕಾರಿ ತಪಾಸಣೆಗೆ ಹೋಗಬೇಕು ಎನ್ನುದನ್ನು ಕಂಪ್ಯೂಟರ್‌ ಮೂಲಕವೇ ನಿರ್ಧರಿಸಲಾಗುವುದು. ಹೀಗೆ ತಪಾಸಣೆಗೆ ಹೋದ ಅಧಿಕಾರ ಅಲ್ಲಿಯ ವರದಿಯನ್ನು 48 ಗಂಟೆಗಳ ಒಳಗೆ ಪೋರ್ಟ್‌ನಲ್ಲಿ ಅಪ್‌ಲೋಡ್‌ ಮಾಡಬೇಕು. ಇದೊಂದು ಅತ್ಯಂತ ಮಹತ್ವದ ನಿರ್ಧಾರ ಎಂದು ಮೋದಿ ಪ್ರಕಟಿಸಿದರು. ಜೊತೆಗೆ ಎಂಎಎಸ್‌ಎಂಇ ವಲಯದ ಅಭಿವೃದ್ಧಿಗೆ ಪೂರಕವಾದ ಇತರೆ ಹಲವು ಕ್ರಮಗಳನ್ನು ಪ್ರಧಾನಿ ಪ್ರಕಟಿಸಿದರು.

59 ನಿಮಿಷದಲ್ಲೇ ಸಾಲ:

ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಸಾಲ ಸೌಲಭ್ಯ ನೀಡಲು www.psbloanin59min.com ಎಂಬ ವೆಬ್‌ ಆರಂಭಿಸಲಾಗಿದೆ. ಈ ಮೂಲಕ ಜಿಎಸ್ಟಿನೊಂದಾಯಿತ ಉದ್ದಿಮೆಗಳು ಕೇವಲ 59 ನಿಮಿಷದಲ್ಲೇ 1 ಕೋಟಿ ರು. ವರೆಗೂ ಸಾಲಸೌಲಭ್ಯ ಪಡೆಯಬಹುದಾಗಿದೆ. ಇಷ್ಟುದಿನ ಉದ್ದಿಮೆ ಸಾಲ ಪಡೆಯಲು 20ರಿಂದ 25 ದಿನಗಳು ಬೇಕಾಗುತ್ತಿದ್ದವು. ಜೊತೆಗೆ ಸಾಲದ ಹಣವನ್ನು ವಿತರಿಸಲು 7ರಿಂದ 8 ದಿನಗಳು ಬೇಕಾಗುತ್ತಿದ್ದವು.

ಜಾಹೀರಾತುಗಳು