ಪ್ರಿಯಕರನ ಚಾಲೆಂಜ್ ಸ್ವೀಕರಿಸಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಪ್ರೇಯಸಿ

Featured, ರಾಜ್ಯ ನ್ಯೂಸ್

ಬೆಂಗಳೂರು: ಪ್ರಿಯಕರ ಮಾಡಿದ ಚಾಲೆಂಜ್‍ಗೆ ಪ್ರೇಯಸಿಯೊಬ್ಬಳು ವಿಷ ಕುಡಿದು ಮೃತಪಟ್ಟಿರುವ ಘಟನೆ ಬೆಂಗಳೂರು ಹೊರವಲಯ ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದಲ್ಲಿ ನಡೆದಿದೆ. ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹರೀಶ್(20) ಚಾಲೆಂಜ್ ಮಾಡಿದ ಪ್ರಿಯಕರನಾಗಿದ್ದು, ದಿವ್ಯ (19) ಸಾವನ್ನಪ್ಪಿದ್ದ ಪ್ರೇಯಸಿ. ದಿವ್ಯ ಸಾವನ್ನಪ್ಪಿದ ವಿಷಯ ತಿಳಿದು ಇತ್ತ ಆರೋಪಿ ಹರೀಶ್ ಪರಾರಿಯಾಗಿದ್ದಾನೆ.

ಪ್ರಿಯಕರ ಹರೀಶ್ ಮತ್ತು ದಿವ್ಯ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಒಂದು ದಿನ ಇಬ್ಬರು ಭೇಟಿಯಾಗಿದ್ದು, ಈ ವೇಳೆ ನನ್ನ ಮೇಲೆ ನಿನಗೆ ನಿಜವಾದ ಪ್ರೀತಿ ಇದ್ದರೆ ವಿಷ ಕುಡಿ ಎಂದು  ಹರೀಶ್ ಚಾಲೆಂಜ್ ಮಾಡಿದ್ದಾನೆ. ದಿವ್ಯ ಪ್ರಿಯಕರನ ಮಾತನ್ನು ನಂಬಿ ವಿಷ ಕುಡಿದ್ದಾಳೆ.

ಮನೆಗೆ ಹೋದ ಬಳಿಕ ದಿವ್ಯ ವಾಂತಿ ಮಾಡಲು ಶುರು ಮಾಡಿದ್ದಾಳೆ. ತಕ್ಷಣ ಆಕೆಯನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಂದು ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ದಿವ್ಯ ಮೃತಪಟ್ಟಿದ್ದಾಳೆ.

ಸದ್ಯಕ್ಕೆ ಪ್ರಿಯಕರ ಹರೀಶ್ ವಿರುದ್ಧ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಜಾಹೀರಾತುಗಳು