ಬಿಜೆಪಿ ದೇಶದ ಬಹುತ್ವವನ್ನು ನಾಶ ಮಾಡಲು ಹೊರಟಿದೆ, ಇದನ್ನು ಜನರು ಅರ್ಥ ಮಾಡಿಕೊಳ್ಳದೆ ಹೋದರೆ ದೇಶಕ್ಕೆ ಅಪಾಯ : ಕಾಂಗ್ರೆಸ್ ಪ್ರತಿಭಟನಾ ಮೆರವಣಿಗೆಯಲ್ಲಿ ನ್ಯಾಯವಾದಿ ಸುಧೀರ್ ಕುಮಾರ್ -Vishwanews24

Featured, ಉಡುಪಿ

ಉಡುಪಿ:  ಕೇಂದ್ರ ಹಾಗೂ ರಾಜ್ಯ ಸರಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಕಾಪು ಉತ್ತರ ವಲಯ ಸಮಿತಿ ವತಿಯಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಹಿರಿಯಡ್ಕದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆಯಲ್ಲಿ ನ್ಯಾಯವಾದಿ ಸುಧೀರ್ ಕುಮಾರ್ ಮರೋಳಿ ಭಾಗವಹಿಸಿ ಮಾತನಾಡಿದರು.

ದೇಶದ ಹಣಕಾಸು ಮಂತ್ರಿ ನಿರ್ಮಲಾ ಸೀತರಾಮನ್ ಮಂಡಿಸಿದ ಬಜೆಟಿನಲ್ಲಿ ದೇಶದ ಸಾಮಾನ್ಯ ಜನರಿಗೆ ಏನು ಉಪಯೋಗ ಇದೆ ಎನ್ನುವುದಕ್ಕಿಂತ ಹೆಚ್ಚು ಅವರು ರೇಷ್ಮೆ ಸೀರೆಯಲ್ಲಿ ಬಜೆಟ್ ಪ್ರತಿಯನ್ನು ತಂದಿರುವುದೇ ಇಂದು ಹೆಚ್ಚು ಚರ್ಚೆಯಾಗುತ್ತಿರುವುದು ದೇಶದ ದುರಂತವಾಗಿದೆ. ದೇಶದ ರಾಷ್ಟ್ರ ನಾಯಕರು ದೇಶದ ಜನರನ್ನು ಕಾರುಣ್ಯ ಪೂರಿತರಾಗಿ ನೋಡುತ್ತಿದ್ದರೆ ಈಗಿನ ಗೃಹ ಸಚಿವ ಅಮಿತ್ ಶಾ ಅವರ ಮುಖದಲ್ಲಿ ಒಂದು ದಿನವೂ ಕೂಡ ಸಿಟ್ಟು ಇಲ್ಲದ ದಿನವೇ ಇಲ್ಲ. ಅವರಲ್ಲಿ ಗಾಂಧಿಜಿಯ ಮಮತೆಯ ಕಣ್ಣಾಗಲಿ, ನೆಹರು ಅವರ ಬಹುತ್ವದ ಕನಸಾಗಲಿ ಅವರ ಮುಖದಲ್ಲಿ ಕಾಣುವುದಿಲ್ಲ. ಅದಕ್ಕಾಗಿಯೋ ಏನೋ ಯಡ್ಯೂರಪ್ಪ ಅವರು ಅಮಿತ್ ಶಾ ಅವರ ಮುಂದೆ ಹೋಗಲು ಕೂಡ ಹೆದರುತ್ತಾರೆ.

 

ಕರಾವಳಿಯ ಲಾಭದ ಬ್ಯಾಂಕುಗಳನ್ನು ಒಂದು ವೇಳೆ ಕಾಂಗ್ರೆಸ್ ಆಡಳಿತದಲ್ಲಿ ವಿಲೀನ ಮಾಡಿದ್ದೇ ಆದರೆ ಇದೇ ಬಿಜೆಪಿಗರು ಜನರ ಕೈಗೆ ಕತ್ತಿಯನ್ನು ನೀಡಿ ಗಲಭೆ ಎಬ್ಬಿಸುವ ಕೆಲಸವನ್ನು ಮಾಡಲು ಹಿಂಜರಿಯುತ್ತಿಲ್ಲ ಆದರೆ ಇಂದು ಅವರೇ ಲಾಭದಲ್ಲಿರುವ ವಿಜಯ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕನ್ನು ವಿಲೀನ ಮಾಡಿದ್ದು ಜನರು ಅದನ್ನು ಗಮನಿಸಬೇಕಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿ ಅವಳಿ ಜಿಲ್ಲೆಗಳಲ್ಲಿ ನೂರಾರು ದೇವಸ್ಥಾನಗಳ ಜಿರ್ಣೋದ್ದಾರ ನಡೆಸಿದ್ದರೆ ಅದೇ ಬಿಜೆಪಿಗರು ಜಿರ್ಣೋದ್ಧಾರ ಮಾಡಿದ ದೇವಸ್ಥಾನಗಳಿಗೆ ಅಂಗಡಿಗೆ ಹೋಗಿ ಕೇಸರಿ ಬಟ್ಟೆಯನ್ನು ತಂದು ದೇವಸ್ಥಾನದ ಮೇಲೆ ಧ್ವಜವನ್ನು ಕಟ್ಟಿ ಜಾತಿ ರಾಜಕೀಯ ಮಾಡಿದ್ದು ಬಿಟ್ಟರೆ ಬೇರೆನೂ ಇಲ್ಲ ಇದನ್ನು ಜನರು ಅರ್ಥ ಮಾಡಿಕೊಳ್ಳದೆ ಹೋದರೆ ಮುಂದೆ ದೇಶಕ್ಕೆ ಅಪಾಯ ಕಾದಿದೆ ಎಂದರು.

ಈ ದೇಶ ಬಹು ಸಂಸ್ಕೃತಿಗಳ ನಾಡು. ಏಕ ಭಾಷೆಯನ್ನು ಹೇರುವ ಮೂಲಕ ಬಿಜೆಪಿ ದೇಶದ ಬಹುತ್ವವನ್ನು ನಾಶ ಮಾಡಲು ಹೊರಟಿದೆ. ಇದನ್ನು ಪ್ರಜ್ಞಾವಂತ ನಾಗರೀಕರು ವಿರೋಧಿಸಬೇಕಾಗಿದೆ. ದೇಶದ ಬಹುತ್ವ ನಾಶವಾದರೆ ದೇಶ ಏಕ ಸಂಸ್ಕೃತಿಯತ್ತ ಸಾಗಿ ಅದು ಸರ್ವಾಧಿಕಾರಕ್ಕೆ ಎಡೆ ಮಾಡುತ್ತದೆ. ಇದು ದೇಶಕ್ಕೆ ಅಪಾಯಕಾರಿ. ಈಗ ಕಾಂಗ್ರೆಸ್, ಬಿಜೆಪಿ, ಕಮ್ಯೂನಿಷ್ಟ್‌ಗೆ ಕಷ್ಟ ಕಾಲವಲ್ಲ ಇಡೀ ದೇಶ ಕಷ್ಟದ ಕಾಲದಲ್ಲಿದೆ. ಈ ನೆಲ ಗಾಂಧಿ ಬಿತ್ತಿದ ಪ್ರೀತಿ, ಮಮತೆಯ ನೆಲ, ನೆಹರೂ ಪ್ರತಿಪಾದಿಸಿದ ಬಹುತ್ವದ ನೆಲ. ಮೋದಿ ಶಾ ಜೋಡಿ ಈ ನೆಲದ ಸೌಹಾರ್ದತೆಯನ್ನು ಹಾಳುಗೆಡವಲು ಈ ದೇಶದ ಜನತೆ ಖಂಡಿತಾ ಬಿಡುವುದಿಲ್ಲ. ಅಪ ಪ್ರಚಾರದ ಸಾಮೂಹಿಕ ಸನ್ನಿಯಿಂದಾಗಿ ಪಕ್ಷಕ್ಕೆ ಸದ್ಯ ಹಿನ್ನಡೆಯಾಗಿರಬಹುದು ಇದು ಎಂದೂ ಶಾಶ್ವತವಲ್ಲ ಎಂದು ಹೇಳಿದರು.

ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ‘ಮರಳುಗಾರಿಕೆಯ ಬಗ್ಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕರಾವಳಿಯ ಸಂಸದರು ಮತ್ತು ಶಾಸಕರು ಜನರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಹಿಂದೆಂದೂ ಕಂಡು-ಕೇಳರಿಯದಂತಹ ಭೀಕರ ಮಳೆಯಿಂದಾದ ಪ್ರವಾಹಕ್ಕೆ ತುತ್ತಾಗಿ ನಿರ್ವಸಿತರಾಗಿರುವ ಜನರ ಸಂಕಷ್ಟಕ್ಕೆ ಸ್ಪಂದಿಸದಿರುವ ಮತ್ತು ಈವರೆಗೆ ಒಂದು ಬಿಡಿಗಾಸು ಪರಿಹಾರವನ್ನ ಘೋಷಿಸದೇ ಭಂಡತನ ಪ್ರದರ್ಶಿಸುತ್ತಿರುವ ಕೇಂದ್ರ ಮತ್ತು ರಾಜ್ಯದ ಬಿ. ಜೆ.ಪಿ ಸರ್ಕಾರದ ನಿರ್ಲಕ್ಷ್ಯ ಧೋರಣೆಯನ್ನು ವಿರೋದಧಿಸುತ್ತಿದ್ದೇವೆ. ಜನ ಸಾಮಾನ್ಯರ ಮೇಲೆ ಹೊರೆಯಾಗುವಂತಹ ನೂತನ ವಾಹನ ಕಾಯ್ದೆಯನ್ನು ಜಾರಿಗೊಳಿಸಿ ಭಾರಿ ದಂಡ ವಸೂಲಿ ಮಾಡುತ್ತಿರುವ ಸರ್ಕಾರದ ಜನವಿರೋಧಿ ಧೋರಣೆ ಖಂಡನೀಯವಾಗಿದೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಜಿಪಂ ಸದಸ್ಯೆ ಚಂದ್ರಿಕಾ ಕೇಳ್ಕರ್, ಮಾಜಿ ಶಾಸಕ ಯು ಆರ್ ಸಭಾಪತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಕಾಪು ಬ್ಲಾಕ್ ಉತ್ತರ ವಲಯಾಧ್ಯಕ್ಷ ಪ್ರವೀಣ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಳೆ, ಕಾಂಗ್ರೆಸ್ ನಾಯಕರಾದ ರೋಶನಿ ಒಲಿವೇರಾ, ಸರಳಾ ಕಾಂಚನ್, ಡಾ ಸುನೀತಾ ಶೆಟ್ಟಿ, ರಮೇಶ್ ಕಾಂಚನ್, ಯತೀಶ್ ಕರ್ಕೇರಾ ಹಾಗೂ ಇತರರು ಉಪಸ್ಥಿತರಿದ್ದರು