ಬಿಜೆಪಿ ಪಕ್ಷ ಒಂದು ಉಗ್ರ ಸಂಘಟನೆ : ಮಮತಾ ಬ್ಯಾನರ್ಜಿ
ಕೋಲ್ಕತ: ಬಿಜೆಪಿ ಪಕ್ಷ ಒಂದು ಉಗ್ರ ಸಂಘಟನೆ, ಆ ಪಕ್ಷ ಜಾತಿ ಮತ್ತು ಧರ್ಮದ ಆಧಾರದಲ್ಲಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದೆ ಮತ್ತು ಟಿಎಂಸಿ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಇಂದು ಮಾತನಾಡಿದ ಅವರು ನಾವು ಬಿಜೆಪಿ ಪಕ್ಷದಂತೆ ಉಗ್ರ ಸಂಘಟನೆಯಲ್ಲ. ಅವರು ಅಹಂಕಾರಿಗಳು ಮತ್ತು ಅಸಹಿಷ್ಣುಗಳು, ಜತೆಗೆ ಧಾರ್ಮಿಕವಾಗಿ ಪಕ್ಷಪಾತ ನೀತಿ ಉಳ್ಳವರು. ಅವರು ಮುಸ್ಲಿಮ್, ಕ್ರೈಸ್ತ ಮತ್ತು ಸಿಖ್ ಧರ್ಮಗಳನ್ನು ಇಷ್ಟ ಪಡುವುದಿಲ್ಲ. ಜತೆಗೆ ಹಿಂದುಗಳಲ್ಲೂ ಮೇಲ್ವರ್ಗ ಮತ್ತು ಕೆಳವರ್ಗದ ಜನರ ನಡುವೆ ತಾರತಮ್ಯ ಮಾಡುತ್ತಿದೆ.
ಬಿಜೆಪಿ ಪಕ್ಷ ದೆಹಲಿಯಲ್ಲಿ ಅಧಿಕಾರದಲ್ಲಿದೆ ಎಂಬ ಮಾತ್ರಕ್ಕೆ ಎನ್ಕೌಂಟರ್ ನಡೆಸುವ ಬೆದರಿಕೆ ಒಡ್ಡುತ್ತಿದ್ದಾರೆ. ಬಾಂಬ್ ದಾಳಿ ನಡೆಸುವ ಕುರಿತು ಮಾತನಾಡುತ್ತಿದ್ದಾರೆ. ಅವರು ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರುವುದಿಲ್ಲ, ಅವರಿಗೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಮಮತಾ ಕಿಡಿ ಕಾರಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುವುದನ್ನು ಸಹಿಸಲು ಸಾಧ್ಯವಿಲ್ಲ, ನಾವು ಸೂಕ್ತ ಪ್ರತ್ಯುತ್ತರ ನೀಡುತ್ತೇವೆ ಎಂದು ತಿಳಿಸಿದ್ದರು
