ಬಿಜೆಪಿ ಮಾಸ್ ಪಾರ್ಟಿ ,ಅಧಿಕಾರ ಇಲ್ಲದಿದ್ದಾಗಲೇ ಚುನಾವಣೆಗೆ ಹೆದರಿಲ್ಲ,ಈಗ ಹೆದರುತ್ತೀವಾ? : ಸಿ.ಟಿ. ರವಿ -Vishwanews24
ದಾವಣಗೆರೆ: ಬಿಜೆಪಿ ಮಾಸ್ ಪಾರ್ಟಿ, ನಾವು ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ತೀವಿ. ಅಧಿಕಾರ ಇಲ್ಲದಿದ್ದಾಗಲೇ ಚುನಾವಣೆಗೆ ಹೆದರಿಲ್ಲ, ಈಗ ಅಧಿಕಾರದಲ್ಲಿ ಇದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ. ರವಿ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು ನೆರೆ ಸಂತ್ರಸ್ತರ ನೆರವಿಗೆ ಬಾರದೇ ಇರುವುದರಿಂದ ಸಂತ್ರಸ್ತರ ಶಾಪ ಬಿಜೆಪಿಗೆ ತಟ್ಟಲಿದೆ ಎಂಬ ಕಾಂಗ್ರೆಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಾಂಗ್ರೆಸ್‌ಗೆ ಇರುವ ಶಾಪಗಳಿಂದ ವಿಮೋಚನೆಯಾಗಲು ಏಳು ಜನ್ಮ ಸಾಲದು’ ಎಂದು ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳನ್ನು ಕಾಂಗ್ರೆಸ್ ಗೆಲ್ಲಬೇಕು, ಪಕ್ಷಕ್ಕೆ ದ್ರೋಹ ಬಗೆದವರಿಗೆ ಪಾಠ ಕಲಿಸಬೇಕು ಎಂಬ ಸಿದ್ದರಾಮಯ್ಯರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ. ರವಿ, ‘ಸ್ವಕ್ಷೇತ್ರದಲ್ಲಿ ಗೆಲ್ಲಲಾರದೇ ಎಲ್ಲೋ ಹೋಗಿ ಬಹಳ ಕಷ್ಟಪಟ್ಟು ದಡ ಸೇರಿದವರು ಅವರು. ಸಮಾಜವನ್ನು ಒಡೆಯಲು ಕೈ ಹಾಕಿದರು. ಅದಾಗಲಿಲ್ಲ. ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಒಂದು ಸೀಟೂ ಗೆಲ್ಲಬಾರದು ಎಂದು ಕಾಂಗ್ರೆಸ್– ಜೆಡಿಎಸ್ ಒಂದಾಯಿತು. ಕೊನೆಗೆ ಪರದಾಡಿ ಎರಡು ಪಕ್ಷಗಳು ಒಂದೊಂದು ಸೀಟು ಪಡೆದವು. ಈಗ ಉಪಚುನಾವಣೆ ಗೆಲ್ತಾರಾ’ ಎಂದು ಪ್ರಶ್ನಿಸಿದರು.
ಗಿಣಿ ಹದ್ದಾಗಿ ಕುಕ್ಕಿತು ಎಂದು ಕಾಂಗ್ರೆಸ್, ಜೆಡಿಎಸ್‌ನವರು ಮಾರ್ಮಿಕವಾಗಿ ಹೇಳಿಕೊಳ್ಳುತ್ತಿದ್ದಾರೆ. ಅವರು ಪರಸ್ಪರ ಕುಕ್ಕಿಕೊಳ್ಳುತ್ತಿರಲಿ. ನಾವು ರಾಜ್ಯದ ಅಭಿವೃದ್ಧಿಯನ್ನು ಮಾಡೋಣ ಎಂದರು.
ಬಿಜೆಪಿ ಮಾಸ್ ಪಾರ್ಟಿ, ನಾವು ಉಪ ಚುನಾವಣೆಯಲ್ಲಿ ಗೆದ್ದೇ ಗೆಲ್ತೀವಿ. ಅಧಿಕಾರ ಇಲ್ಲದಿದ್ದಾಗಲೇ ಚುನಾವಣೆಗೆ ಹೆದರಿಲ್ಲ. ಈಗ ಅಧಿಕಾರದಲ್ಲಿ ಇದ್ದೇವೆ. ಹೆದರುವ ಪ್ರಶ್ನೆಯೇ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.
