ಬಿಲ್ಲವ ಯುವಕರನ್ನು ಕೋಮು ಗಲಭೆಗಳಿಗೆ ಬಳಕೆ ಮಾಡಿ ಅಪರಾಧಿಗಳನ್ನಾಗಿ ಮಾಡಿದ್ದೇ ಬಿಜೆಪಿ ಸಾಧನೆ :ಮಧು ಬಂಗಾರಪ್ಪ- Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಬಿಲ್ಲವರ ಯುವಕರನ್ನು ಕೋಮು ಗಲಭೆಗಳಿಗೆ ಬಳಕೆ ಮಾಡಿ ಅಪರಾಧಿಗಳನ್ನಾಗಿ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಶಿವಮೊಗ್ಗ ಲೋಕಸಭೆ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.

ಮಂಗಳೂರಿನ ಕಾಂಗ್ರೆಸ್‌-ಜೆಡಿಎಸ್‌ ಚುನಾವಣಾ ಪ್ರಚಾರ ಕಚೇರಿಯಲ್ಲಿ nಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ಆಣತಿಯಂತೆ ಕೆಲಸ ಮಾಡಿ ಬಿಲ್ಲವ ಯುವಕರು ಜೈಲು ಸೇರಿದ್ದಾರೆ. ಅವರನ್ನು ಜೈಲಿನಿಂದ ಬಿಡಿಸುವ ಮತ್ತು ಅವರ ಪರವಾಗಿ ವಕಾಲತ್ತು ವಹಿಸುವ ಕೆಲಸವನ್ನೂ ಬಿಜೆಪಿ ಮಾಡುತ್ತಿಲ್ಲ. ಅಮಾಯಕರನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ದ.ಕ. ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಮಿಥುನ್‌ ರೈ ಅವರನ್ನು ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌ ಗೂಂಡಾ ಎಂದು ಲೇವಡಿ ಮಾಡಿದ್ದಾರೆ. ಆದರೆ, ಈ ಮೊದಲು ಅಧಿಕಾರದಲ್ಲಿದ್ದಾಗ ಇದೇ ಅಶೋಕ್‌ ಅವರು ಆರೆಸ್ಸೆಸ್‌, ಬಜರಂಗ ದಳ ಕಾರ್ಯಕರ್ತರಿಗೆ ಗೂಂಡಾಗಳೆಂಬ ಪಟ್ಟ ಕಟ್ಟಿದ್ದರು. ಇಲ್ಲಿಯವರೆಗೆ ಆರೆಸ್ಸೆಸ್‌ನ ಗೂಂಡಾಗಳು ಕಾಣಿಸಲಿಲ್ಲವೇ ಎಂದರು.

ಕರಾವಳಿಯಲ್ಲಿ ಈ ಮೊದಲು ಬೆಂಕಿ ಹಚ್ಚುವ ಮಾತುಗಳೇ ಕೇಳಿಬರುತ್ತಿದ್ದವು. ಆದರೆ, ಮೈತ್ರಿ ಸರಕಾರ ಬಂದಾಗಿನಿಂದ ಕರಾವಳಿ ಭಾಗ ಶಾಂತಿಯುತ, ಸೌಹಾರ್ದದಿಂದ ಕೂಡಿದೆ. ಅಧಿಕಾರಿಗಳ ಮೂಲಕ ಸರಕಾರವು ಸೌಹಾರ್ದ ಮೆರೆಯುವಲ್ಲಿ ಯಶಸ್ಸನ್ನು ಕಂಡಿದೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ್ನು ಬೆಂಬಲಿಸಬೇಕಿದೆ. ಕರಾವಳಿ ಪ್ರದೇಶದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಮುಖಂಡರಾದ ಸುರೇಶ್‌ ಬಳ್ಳಾಲ್‌, ಟಿ.ಕೆ. ಸುಧೀರ್‌, ಎ.ಸಿ. ವಿನಯರಾಜ್‌, ಜೆಡಿಎಸ್‌ ಮುಖಂಡರಾದ ಮುಹಮ್ಮದ್‌ ಕುಂಞಿ, ಅಕ್ಷಿತ್‌ ಸುವರ್ಣ ಉಪಸ್ಥಿತರಿದ್ದರು.