ಬುಲ್ ಟ್ರಲ್ ಮತ್ತು ಲೈಟ್‌ ಫಿಶಿಂಗ್ ನಡೆಸುವ ಬೋಟ್ಗಳಿಗೆ ಡೀಸೆಲ್ ಸಬ್ಸಿಡಿ ಕಡಿತ -Vishwanews24

Featured, ಉಡುಪಿ

ಉಡುಪಿ: ಬುಲ್ ಟ್ರಲ್ ಮತ್ತು ಬೆಳಕು ಮೀನುಗಾರಿಗೆ ನಡೆಸುವ ಬೋಟ್ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳಿಗೆ ಸರಕಾರದ ಕಾರ್ಯದರ್ಶಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಂ. ಮಹೇಶ್ವರ ರಾವ್ ಸೂಚಿಸಿದ್ದಾರೆ.

ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಜಿಲ್ಲಾಭಿವೃದ್ಧಿ, ಮರಳು ಸಮಸ್ಯೆ ಹಾಗೂ ನೆರೆ ಪರಿಹಾರಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರಕಾರವು ಬುಲ್ಟ್ರಾಲ್ ಹಾಗೂ ಬೆಳಕು ಮೀನುಗಾರಿಕೆಯನ್ನು ನಿಷೇಧಿಸಿದ್ದರೂ ಸಹ, ಇವುಗಳನ್ನು ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿರುವ ಕುರಿತು ಮಾಹಿತಿ ಪಡೆದ ಮಹೇಶ್ವರ ರಾವ್, ನಿಷೇಧ ಉಲ್ಲಂಘಿಸುವ ಬೋಟ್ಗಳಿಗೆ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವಂತೆ ಹಾಗೂ ಇಂತಹ ಬೋಟ್ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಹಾಗೂ ಅತೀ ಹೆಚ್ಚಿನ ದಂಡ ವಿಧಿಸುವ, ಲೈಸೆನ್ಸ್ ರದ್ದುಗೊಳಿಸುವ ಕುರಿತಂತೆ ಕರ್ನಾಟಕ ಮರೈನ್ ಫಿಷಿಂಗ್ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ಮಾಡುವ ಬಗ್ಗೆ ಹಾಗೂ ಇವುಗಳನ್ನು ಪತ್ತೆ ಹಚ್ಚಲು ಪ್ರತ್ಯೇಕ ತಂಡ ರಚಿಸುವ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ತಿಳಿಸಿದರು.

ಬೆಳಕು ಮೀನುಗಾರಿಕಾ ತಡೆಯುವ ನಿಟ್ಟಿನಲ್ಲಿ ಬಂದರು ದ್ವಾರದಲ್ಲೇ ಜನರೇಟರ್ ತೆಗೆದುಕೊಂಡು ಹೋಗುವುದನ್ನು ತಡೆಯುವಂತೆ ಹಾಗೂ ಈ ಬಗ್ಗೆ ಪೊಲೀಸ್ ಇಲಾಖೆಯ ನೆರವು ಪಡೆಯುವಂತೆ ಸೂಚಿಸಿದ ಅವರು, ಮೀನುಗಾರಿಕೆ ತೆರಳುವವರ ಸರಿಯಾದ ಮಾಹಿತಿ ಹೊಂದುವ ನಿಟ್ಟಿನಲ್ಲಿ ಡೀಸೆಲ್ ಬಂಕ್ನಲ್ಲಿಯೇ ಬೋಟ್ನಲ್ಲಿ ತೆರಳುವವರ ಸಂಪೂರ್ಣ ವಿವರ ಪಡೆಯುವಂತೆ ಹಾಗೂ ಸಮುದ್ರದಲ್ಲಿ ಬೋಟ್ಗಳನ್ನು ಸರಿಯಾದ ರೀತಿಯಲ್ಲಿ ಪತ್ತೆ ಹಚ್ಚುವ ಕುರಿತಂತೆ ಬೋಟ್ ಟ್ರಾಕಿಂಗ್ ಸಿಸ್ಟಂ ನನ್ನು ಎಲ್ಲಾ ಬೋಟ್ಗಳಲ್ಲಿ ಅಳವಡಿಸುವಂತೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಸಿಇಒ ಪ್ರೀತಿ ಗೆಹಲೋತ್, ಎಸ್.ಪಿ ನಿಶಾ ಜೇಮ್ಸ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.