ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತಕುಮಾರ್ ಬದಲು ತೇಜಸ್ವಿ ಸೂರ್ಯಗೆ ಟಿಕೇಟ್‌ ನೀಡಿದ ಬಿಜೆಪಿ – Vishwanews24

Featured, ರಾಜ್ಯ ನ್ಯೂಸ್

ಬೆಂಗಳೂರುಬಿಜೆಪಿಯ ಭದ್ರಕೋಟೆ ಎನಿಸಿರುವ ದಕ್ಷಿಣ ಲೋಕಸಭಾ ಕ್ಷೇತ್ರಕ್ಕೆ ಯುವ ವಕೀಲ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿ ಕಣಕ್ಕಿಳಿಸಲು ತೀರ್ಮಾನಿಸಿದೆ. ಸೋಮವಾರ ಮಧ್ಯರಾತ್ರಿಯವರಿಗೆ ನಡೆದ ಚರ್ಚೆ ಹಾಗೂ ನಾಟಕೀಯ ಬೆಳವಣಿಗೆಗಳ ಫಲವಾಗಿ ಅಂತಿಮ ಹೆಸರು ತೇಜಸ್ವಿ ಸೂರ್ಯ ಎಂದು ತಿಳಿದುಬಂದಿದೆ.

ಅನಂತಕುಮಾರ್ ಪತ್ನಿ ತೇಜಸ್ವಿನಿ ಅವರು ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಯುವ ವಕೀಲ ತೇಜಸ್ವಿ ಸೂರ್ಯ ಹೆಸರು ಪ್ರಕಟವಾಗಿದೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದ ಜೊತೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿದ್ದವು.

ಚೌಕಿದಾರ್ ತೇಜಸ್ವಿ ಎಂಬ ಹ್ಯಾಷ್ ಟ್ಯಾಗ್ ನಲ್ಲಿ ಪ್ರತಿಕ್ರಿಯಿಸಿರುವ ತೇಜಸ್ವಿ ಸೂರ್ಯ, ವಿನೀತ, ಕೃತಜ್ಞ, ಈ ಅವಕಾಶ ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸುತ್ತೇನೆ. ಆದರೆ, ಎಷ್ಟೇ ಧನ್ಯವಾದ ಹೇಳಿದರೂ ಅದು ಸಾಲದು. ನನ್ನ ಕೊನೆ ಉಸಿರಿರುವ ತನಕ ನನ್ನ ತಾಯ್ನಾಡಿನ ಸೇವೆ ಸಲ್ಲಿಸುವ ಪ್ರಮಾಣ ಮಾಡುತ್ತೇನೆ. ಹೀಗೆ ಮಾಡುವುದರ ಮೂಲಕವಷ್ಟೇ ನನ್ನ ಕೃತಜ್ಞತೆಗಳನ್ನು ಸಲ್ಲಿಸಬಹುದು ಎಂದು ಹೇಳಿದ್ದಾರೆ.

ಇದನ್ನು ಟೈಪಿಸುವ ವೇಳೆ ನನ್ನ ಕೈಗಳು ನಡುಗುತ್ತಿವೆ. ಕಳೆದ ವರ್ಷ, ನಾನು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿ ಮಾಡಿ ಅವರ ಜೊತೆ ಮಾತನಾಡುವ  ಅವಕಾಶ ಸಿಕ್ಕಿತ್ತು. ಒಂದು ಗಂಟೆ ಕಾಲ ನಮ್ಮಿಬ್ಬರ ಮಾತುಕತೆ ನಡೆಯಿತು. ಅದು ನನ್ನನ್ನು ಸಾಕಷ್ಟು ಪ್ರೇರೇಪಿಸಿತು. ಇದೇ ಗುಂಗಿನಲ್ಲಿ ನನಗೆ ಒಂದು ವಾರ ನಿದ್ರೆ ಮಾಡಲಿಲ್ಲ ಎಂದು ಹೇಳಿಕೊಂಡಿದ್ದಾರೆ.

‘ಓ ದೇವರೆ ನಾನು ಇದನ್ನು ನಂಬಲು ಆಗುತ್ತಿಲ್ಲ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಧಾನಮಂತ್ರಿ ಮತ್ತು ಬೃಹತ್ ರಾಜಕೀಯ ಪಕ್ಷದ ಅಧ್ಯಕ್ಷರು ನಂಬಿಕೆ, ವಿಶ್ವಾಸಗಳನ್ನು ಈ 28 ವರ್ಷದ ಯುವಕನ ಮೇಲೆ ಇಟ್ಟು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುವಂತೆ ಹೇಳಿದ್ದಾರೆ. ಇದು ಕೇವಲ ಬಿಜೆಪಿಯಲ್ಲಿ ಮಾತ್ರ ನಡೆಯುತ್ತದೆ’ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.