ಬೇರೆ ಜಿಲ್ಲೆಗಳನ್ನು ಅರ್ಥ ಮಾಡಿಕೊಳ್ಳುವ ಮೂಲಕ ಕಾರ್ಯಕರ್ತನಾಗಿ ಕೆಲಸ ಮಾಡಿ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ : ನಿಖಿಲ್ ಕುಮಾರಸ್ವಾಮಿ -Vishwanews24
ಮಂಡ್ಯ : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲನುಭವಿಸಿದ ನಿಖಿಲ್ ಕುಮಾರಸ್ವಾಮಿ ಚುನಾವಣೆ ಬಳಿಕ ಕ್ಷೇತ್ರದ ಜನರೊಂದಿಗೆ ಬೆರೆಯಲು ನಿರ್ಧರಿಸಿದ್ದಾರೆ.
ಈ ಕುರಿತು ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಮುಖಂಡರೊಂದಿಗೆ ಚರ್ಚಿಸಿರುವ ವಿಡಿಯೋ ವೈರಲ್ ಆಗಿದ್ದು, ವಿಡಿಯೋದಲ್ಲಿ ನಿಖಿಲ್, ನಾನು ಸೋತರೂ ಮಂಡ್ಯ ಬಿಡುವುದಿಲ್ಲ. ತಳಮಟ್ಟದಿಂದ ಜೆಡಿಎಸ್ ಸಂಘಟನೆಗೆ ಮುಂದಾಗುವುದಾಗಿ ಹೇಳಿಕೊಂಡಿದ್ದಾರೆ.
ನಾನು ಮೊದಲಿಗಿಂತಲೂ ತುಂಬಾ ಬದಲಾಗಿದ್ದೇನೆ. ನಾವು ಜನರನ್ನು ಮುಖತಃ ಭೇಟಿ ಮಾಡಿದರೆ ಮಾತ್ರ ವಾಸ್ತವ ಏನು ಎಂಬುದು ಗೊತ್ತಾಗುತ್ತದೆ. 8 ತಾಲೂಕುಗಳನ್ನು 40-45 ದಿನ ಸುತ್ತಿದ ನಂತರ ಈ ವಿಚಾರ ನನಗೆ ಗೊತ್ತಾಗಿದೆ.
ಬೇರೆ ಜಿಲ್ಲೆಗಳನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಈಗ ಕಾರ್ಯಕರ್ತನಾಗಿ ಆ ಕೆಲಸ ಮಾಡುತ್ತೇನೆ ಎನ್ನುವ ಮೂಲಕ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಮಂಡ್ಯದಲ್ಲಿ ತೋಟವನ್ನು ಖರೀದಿಸಿ ಅಲ್ಲಿಯೇ ವಾಸ ಮಾಡುವುದಾಗಿ ತಿಳಿಸಿರುವ ಅವರು, ಮನೆ ಆಗುವವರೆಗೂ ಕಾಯದೆ, ತೋಟದಲ್ಲೇ ಶೆಡ್ ಹಾಕಿ, ಅದರಲ್ಲೇ ವಾಸ ಮಾಡುವುದಾಗಿಯೂ ತಿಳಿಸಿದ್ದಾರೆ.
