ಭಯೋತ್ಪಾದಕ ಎಂದು ಘೋಷಿಸಲು ಅನುಮತಿ ನೀಡುವ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಅನುಮೋದನೆ -Vishwanews24
ನವದೆಹಲಿ: ಭಯೋತ್ಪಾದಕ ಎಂದು ಘೋಷಿಸಲು ಅನುಮತಿ ನೀಡುವ ಕಾನೂನು ಬಾಹಿರ ಚಟುವಟಿಕೆ(ತಡೆ) ತಿದ್ದುಪಡಿ ಮಸೂದೆ- 2019 ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ.
ಭಯೋತ್ಪಾದನೆ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಜಾರಿ ಮಾಡುವ ಮಸೂದೆಯ ಪರ 147 ಮತಗಳು ಬಂದರೆ, ವಿರೋಧವಾಗಿ 42 ಮತಗಳು ಬಿದ್ದಿದೆ.
ಸದನದ ಚರ್ಚೆ ವೇಳೆ ಮಾತನಾಡಿದ ಕೇಂದ್ರ ಸಚಿವ ಅಮಿತ್ ಶಾ ಅವರು, ಈ ಕಾಯ್ದೆಯಿಂದ ಯಾವುದೇ ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಯಾವುದೇ ಒಂದು ಸಂಸ್ಥೆಯನ್ನು ನಿಷೇಧ ಮಾಡಿದ ಬಳಿಕ ಬೇರೆ ಹೆಸರಿನಲ್ಲಿ ವಿವಿಧ ಸಂಘಟನೆಗಳು ನಿರ್ಮಾಣ ಆಗುತ್ತಿರುವುದರಿಂದ ವ್ಯಕ್ತಿಗಳನ್ನು ಭಯೋತ್ಪಾಕರು ಎಂದು ಘೋಷಿಸುವ ಅಗತ್ಯವಿದೆ. ಯಾವುದೇ ಒಬ್ಬ ವ್ಯಕ್ತಿ ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡರೆ ಅವರ ಹೆಸರನ್ನು ಉಗ್ರ ಎಂದು ಘೋಷಣೆ ಮಾಡುವುದು ಅಗತ್ಯ ಎಂದು ಸಮರ್ಥಿಸಿದರು.
ಸಮಾಜದಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಸುವ ವ್ಯಕ್ತಿಯನ್ನು ಭಯೋತ್ಪಾದಕ ಎಂದು ಘೋಷಿಸಲು ಸರ್ಕಾರಕ್ಕೆ ಬಲವನ್ನು ನೀಡುವ ಮಸೂದೆ ಇದಾಗಿದೆ. ವ್ಯಕ್ತಿಯೊಬ್ಬನನ್ನು ಭಯೋತ್ಪಾದಕ ಎಂದು ಹೇಗೆ ಪರಿಗಣಿಸುವುದು ಎಂದು ಮಸೂದೆಯಲ್ಲಿ ಸ್ಪಷ್ಟವಾಗಿ ನಮೂದಿಸಿಲ್ಲ, ಇದು ಕಠಿಣವಾಗಿದೆ, ಹೀಗಾಗಿ ಮಸೂದೆಯನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿರೋಧ ಪಕ್ಷಗಳು ಆರಂಭದಲ್ಲಿ ಸದನದಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
1967ರ ಕಾನೂನು ಬಾಹಿರ ಚಟುವಟಿಕೆಗಳು(ತಡೆಗಟ್ಟುವಿಕೆ)ಕಾಯ್ದೆಗೆ ತಿದ್ದುಪಡಿ ಕೋರಿ ಲೋಕಸಭೆಯಲ್ಲಿ ಕಳೆದ ವಾರ ಮಂಡಿಸಲಾಗಿದ್ದ ಕಾನೂನುಬಾಹಿರ ಚಟುವಟಿಕೆಗಳು(ತಿದ್ದುಪಡಿ)ವಿಧೇಯಕ ಮಸೂದೆ 2019ಕ್ಕೆ ಧ್ವನಿಮತದ ಮೂಲಕ ಅಂಗೀಕಾರ ಸಿಕ್ಕಿತ್ತು. ಇಂದು ರಾಜ್ಯಸಭೆಯಲ್ಲಿ ಕೂಡ ಧ್ವನಿಮತದ ಮೂಲಕ ನಡೆದ ಪ್ರಕ್ರಿಯೆಯಲ್ಲಿ ಅಂಗೀಕಾರ ಸಿಕ್ಕಿದೆ.
