ಭಾರತ ದಾಳಿ ನಡೆಸಿದರೆ ಅದಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ : ಪಾಕ್ ಪ್ರಧಾನಿ ಇಮ್ರಾನ್​ ಖಾನ್ – Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ನವದೆಹಲಿ: ಪುಲ್ವಾಮಾ ದಾಳಿ ನಂತರದಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟಿದೆ. ಪಾಕಿಸ್ತಾನ ಸಲಹುತ್ತಿರುವ ಉಗ್ರರ ವಿರುದ್ಧ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ ನಡೆಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ. ಈ ಬೆಳವಣಿಗೆ ನಂತರದಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಭಾರತಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಭಾರತ ದಾಳಿ ನಡೆಸಿದರೆ ಅದಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ ಎಂದಿದ್ದಾರೆ.

ಪುಲ್ವಾಮಾ ದಾಳಿ ನಂತರ ಇದೇ ಮೊದಲ ಬಾರಿಗೆ ಮೌನ ಮುರಿದಿರುವ ಇಮ್ರಾನ್​ ಖಾನ್​, “ಯುದ್ಧವನ್ನು ಆರಂಭಿಸುವುದು ತುಂಬಾ ಸುಲಭ. ಆದರೆ, ಈ ಯುದ್ಧ ಹೇಗೆ ಅಂತ್ಯಗೊಳ್ಳುತ್ತದೆ ಎಂಬುದನ್ನು ದೇವರು ಮಾತ್ರ ಅರಿಯಲು ಸಾಧ್ಯ. ಸಮಸ್ಯೆಗಳನ್ನು ಬಗೆಹರಿಸಲು ಅಹಿಂಸೆ ಮಾರ್ಗವಲ್ಲ. ಮಾತುಕತೆ ಮೂಲಕ ಎಲ್ಲದಕ್ಕೂ ನಾವು ಪರಿಹಾರ ಕಂಡುಕೊಳ್ಳಬಹುದು,” ಎಂದಿದ್ದಾರೆ.

ಪುಲ್ವಾಮಾ ದಾಳಿಯ ಹಿಂದೆ ಪಾಕ್​ ಕೈವಾಡವಿದೆ ಎಂದು ಭಾರತ ಆರೋಪಿಸಿದೆ. ಆದರೆ, ಈ ಆರೋಪವನ್ನು ಇಮ್ರಾನ್​ ಖಾನ್​ ತಿರಸ್ಕರಿಸಿದ್ದಾರೆ. “ಭಾರತ ಯಾವುದೇ ಸಾಕ್ಷ್ಯವಿಲ್ಲದೆ ಪಾಕಿಸ್ತಾನದ ವಿರುದ್ಧ ಸುಖಾಸುಮ್ಮನೆ ಆರೋಪ ಮಾಡುತ್ತಿದೆ. ಶಾಂತಿ ಕಾಪಾಡಲು ಲಕ್ಷಾಂತರ ಮಂದಿ ನಮ್ಮವರು ಪ್ರಾಣ ಬಿಟ್ಟಿದ್ದಾರೆ. ಹೀಗಿರುವಾಗ ನಾವೇಕೆ ಈ ರೀತಿ ದಾಳಿಗಳಿಗೆ ಕುಮ್ಮಕ್ಕು ನೀಡುತ್ತೇವೆ? ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ನಡೆಯುವ ತನಿಖೆಗೆ ಪಾಕಿಸ್ತಾನ ಸಂಪೂರ್ಣ ಬೆಂಬಲ ನೀಡಲಿದೆ,” ಎಂದು ಅವರು ಆಶ್ವಾಸನೆ ನೀಡಿದ್ದಾರೆ.