ಮಂಗಳೂರು: ಎಂಆರ್ ಪಿಎಲ್ ದುರಂತ : ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್ -vishwanews24
ಮಂಗಳೂರು: ಎಂಆರ್ ಪಿಎಲ್ ದುರಂತ : ಕಂಪನಿ ಅಧಿಕಾರಿಗಳ ವಿರುದ್ಧ ಎಫ್ಐಆರ್
ಮಂಗಳೂರು : ಎಂಆರ್ ಪಿಎಲ್ ತೈಲ ಸ್ಥಾವರ ಘಟಕದಲ್ಲಿ ನಡೆದ ದುರಂತಕ್ಕೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವೆಂದು ಸುರತ್ಕಲ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಘಟನೆಯಲ್ಲಿ ಒಟ್ಟು 13 ಮಂದಿ ಗಾಯಗೊಂಡಿದ್ದು, ಈ ಪೈಕಿ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ(23) ಸ್ಥಳದಲ್ಲೇ ಸುಟ್ಟು ಕರಕಲಾಗಿದ್ದಾರೆ.
ಕಾರ್ಕಳ ಹಿರ್ಗಾನ ನಿವಾಸಿ ರವಿ ಪೂಜಾರಿ ಎಂಬವರು ಎಂಆರ್ ಪಿಎಲ್ 3ನೇ ಫೇಸ್ ನಲ್ಲಿರುವ ಘಟಕದ ನೌಕರರಿಗೆ ಊಟ, ಉಪಹಾರ ಪೂರೈಸುವ ಕೆ-ಸ್ಟಾರ್ ಫುಡ್ ಅಂಡ್ ಹಾಸ್ಪಿಟಾಲಿಟಿ ಸಂಸ್ಥೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಮಧ್ಯಾಹ್ನ 12.15ರ ವೇಳೆಗೆ ಊಟ ವಿತರಣೆಗೆ ಬಂದಿದ್ದಾಗ ಕೋಕರ್ ಹೈಡೋ ಟ್ರೇಯರ್ ಯೂನಿಟ್ ನಲ್ಲಿ ಒಮ್ಮಿಂದೊಮ್ಮೆಲೇ ಸ್ಫೋಟ ಸಂಭವಿಸಿದೆ.
ಇದರಿಂದಾಗಿ ರವಿ ಪೂಜಾರಿ ಸೇರಿದಂತೆ ಸ್ಥಳದಲ್ಲಿದ್ದ ಘಟಕದ ನೌಕರರಾದ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ ಗಾಯಗೊಂಡಿದ್ದಾರೆ. ರಾಜೇಶ್ ಪೂಜಾರಿ ಮತ್ತು ಮನೀಶ್ ಕರ್ಕಡ ಎಂಬವರಿಗೆ ಗಂಭೀರ ಗಾಯವಾಗಿದ್ದು, ಮನೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಎಂಆರ್ ಪಿಎಲ್ ಫೇಸ್ 3ರಲ್ಲಿ ಕೋಕರ್ ಹೈಡೋ ಟೀಯರ್ ಯೂನಿಟ್ ನಲ್ಲಿ ಯಂತ್ರೋಪಕರಣಗಳನ್ನು ಯುನಿಟ್ ಮುಖ್ಯಸ್ಥರು ಮತ್ತು ಎಂಆರ್ ಪಿಎಲ್ ಸಂಸ್ಥೆಯವರು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷ್ಯ ವಹಿಸಿದ್ದರಿಂದ ಘಟನೆ ನಡೆದಿದೆ ಎಂದು ರವಿ ಪೂಜಾರಿಯವರ ದೂರಿನಂತೆ ಸುರತ್ಕಲ್ ಠಾಣೆಯಲ್ಲಿ ಬಿಎನ್ಎಸ್ 287, 125 ಬಿ, 106 ಅಡಿ ಪ್ರಕರಣ ದಾಖಲಾಗಿದೆ.
