ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ಗೂ, ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆ, ಈ ಬಗ್ಗೆ ಪೊಲೀಸರಿಂದ ಮಾಹಿತಿ : ಡಿಕೆ ಶಿ – Vishwanews24
ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ಗೂ, ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಸಾಮ್ಯತೆ ಇದೆ, ಪೊಲೀಸರಿಂದ ಮಾಹಿತಿ : ಡಿಕೆ ಶಿ
ಬೆಂಗಳೂರು : ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ, ಯಾರನ್ನೂ ರಕ್ಷಿಸಲ್ಲ. ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೂ, ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪಕ್ರರಣಕ್ಕೂ ಸಾಮ್ಯತೆ ಇದೆ. ಈ ಬಗ್ಗೆ ನಮ್ಮ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಆರೋಪಿ ಬಸ್ನಲ್ಲಿ ಬಂದು ಹೋಗಿರುವ ದೃಶ್ಯಗಳು ಪತ್ತೆಯಾಗಿವೆ. ಆರೋಪಿ ಬಗ್ಗೆ ಮತ್ತಷ್ಟು ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಎಲ್ಲ ಆಯಾಮಗಳಲ್ಲೂ ಪ್ರಕರಣದ ತನಿಖೆ ಮಾಡುತ್ತಿದ್ದೇವೆ. ಪ್ರಕರಣದ ತನಿಖೆಗೆ ಪೊಲೀಸರು 7-8 ತಂಡ ರಚನೆ ಮಾಡಿದ್ದಾರೆ. ಪ್ರಕರಣದ ತನಿಖೆಗೆ ಪೊಲೀಸರಿಗೆ ಮುಕ್ತ ಅವಕಾಶಕೊಟ್ಟಿದ್ದೇವೆ ಎಂದರು.
ಬೆಂಗಳೂರಿನ ಜನರು ಯಾವುದೆ ಆತಂಕಪಡುವ ಅಗತ್ಯವಿಲ್ಲ. ಬ್ರ್ಯಾಂಡ್ ಬೆಂಗಳೂರು ಹೆಸರು ಹಾಳು ಮಾಡುವ ಪ್ರಯತ್ನ ನಡೆದಿದೆ. ಬೆಂಗಳೂರನ್ನು ಹಾಳು ಮಾಡುವ ಎಲ್ಲ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಏನೇ ರಾಜಕೀಯ ಮಾಡಿಕೊಳ್ಳಲಿ, ಅದರ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ನಮಗೆ ಸಹಕಾರ ಕೊಡೋದಾದರೆ ಕೊಡಲಿ, ರಾಜಕೀಯ ಮಾಡುತ್ತಾರೆಂದರೆ ಮಾಡಿಕೊಳ್ಳಲಿ ಎಂದು ಟಾಂಗ್ ಕೊಟ್ಟರು.
ಇದು ಏಕವ್ಯಕ್ತಿ ಮಾಡಿರುವುದಾ ಅಥವಾ ಸಂಘಟನೆ ಮಾಡಿರುವುದಾ ನೋಡಬೇಕಿದೆ. ಮಂಗಳೂರು ಬ್ಲಾಸ್ಟ್ಗೂ ಇದಕ್ಕೂ ಸಾಮ್ಯತೆ ಕಾಣಿಸುತ್ತಿದೆ. ನಮ್ಮ ಪೊಲೀಸ್ ಅಧಿಕಾರಿಗಳು ಹೇಳುವ ಪ್ರಕಾರ ಬ್ಲಾಸ್ಟ್ಗೆ ಬಳಸಿರುವ ವಸ್ತುಗಳನ್ನು ನೋಡಿದಾಗ ಮಂಗಳೂರು ಮತ್ತು ಬೆಂಗಳೂರಿನಲ್ಲಿ ಆದ ಸ್ಫೋಟದಲ್ಲಿ ಸಾಮ್ಯತೆ ಇದೆ. ಮಂಗಳೂರು, ಶಿವಮೊಗ್ಗ ಪೊಲೀಸ್ ಅಧಿಕಾರಿಗಳು ಕೂಡ ಬೆಂಗಳೂರಿಗೆ ಬಂದು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಗೂ, ಬೆಂಗಳೂರು ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಗೂ ಸಾಮ್ಯತೆ ಇಲ್ಲ ಎಂದಿದ್ದರು.
