ಮಂಗಳೂರು: ಜಿಲ್ಲೆಯಲ್ಲಿ ಲಸಿಕೆ ಪೋಲಾಗದೆ ನಿಗದಿತ ಗುರಿಗಿಂತ ಹೆಚ್ಚು ಬಳಕೆ  -Vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಜಿಲ್ಲೆಯಲ್ಲಿ ಲಸಿಕೆ ಪೋಲಾಗದೆ ನಿಗದಿತ ಗುರಿಗಿಂತ ಹೆಚ್ಚು ಬಳಕೆ  -Vishwanews24

ಮಂಗಳೂರು : ರಾಜ್ಯಾದ್ಯಂತ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದ್ದು, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ದ.ಕ ಜಿಲ್ಲೆಯಲ್ಲಿ ಲಸಿಕೆ ಪೋಲಾಗದೆ ನಿಗದಿತ ಗುರಿಗಿಂತ ಹೆಚ್ಚು ಲಸಿಕೆ ಬಳಕೆಯಾಗುತ್ತಿದೆ.

ಯಾವುದೇ ರೀತಿಯಲ್ಲಿ ಲಸಿಕೆ ಪೋಲಾಗದಂತೆ ಲಸಿಕೆ ನೀಡಲಾಗುತ್ತಿದೆ. ಇದರ ಜೊತೆ ಜಿಲ್ಲೆಯಲ್ಲಿ ಲಸಿಕೆ ಪ್ರಮಾಣ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಸಾರ್ವತ್ರಿಕರ ಲಸಿಕೆಯ ಸಂದರ್ಭ ಲಸಿಕೆ ಪೋಲಾಗುವುದು ಸಾಮಾನ್ಯ. 11 ಎಂಎಲ್ ಲಸಿಕೆಗಳನ್ನು ಒಳಗೊಂಡ ಪ್ರತಿ ಕೋವಿಶೀಲ್ಡ್‌ ಹಾಗೂ ಕೊವ್ಯಾಕ್ಸಿನ್‌‌ ಲಸಿಕೆ ಸೀಸೆಗಳ ಕಾಲಾವಧಿ ನಾಲ್ಕು ಗಂಟೆ ಮಾತ್ರವಾಗಿದ್ದು, ಕೂಡಲೆ ಫಲಾನುಭವಿಗಳಿಗೆ ನೀಡಬೇಕು. ನಾಲ್ಕು ಗಂಟೆ ಕಳೆದ ಬಳಿಕ ಆ ಲಸಿಕೆಯನ್ನು ಉಪಯೋಗ ಮಾಡುವಂತಿಲ್ಲ. ಈ ಹಿನ್ನೆಲೆ ಕೆಲವು ಜಿಲ್ಲೆಗಳಲ್ಲಿ ಲಸಿಕೆ ಪೋಲಾಗುತ್ತಿದೆ. ಆದರೆ, ದ.ಕ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ದಾದಿಯರ, ಸಾರ್ವಜನಿಕರ ಸಮನ್ವಯದ ಕಾರಣ ಯಾವುದೇ ರೀತಿಯಲ್ಲಿ ಲಸಿಕೆ ಪೋಲಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಲಸಿಕೆ ಅಭಿಯಾನದ ಮೊದಲ ಕೆಲ ದಿನಗಳು ಕೊವ್ಯಾಕ್ಸಿನ್‌ ಲಸಿಕೆ ನೀಡಲಾಗಿತ್ತು. ನಂತರದ ದಿನಗಳಲ್ಲಿ ಕೋವಿಶೀಲ್ಡ್‌‌ ಲಸಿಕೆ ನೀಡಲಾಗಿದೆ. ಎರಡು ಲಸಿಕೆಗಳಲ್ಲಿ ಹೋಲಿಕೆ ಮಾಡಿದರೆ, ಜಿಲ್ಲೆಯಲ್ಲಿ ಕೋವಿಶೀಲ್ಡ್‌ ಲಸಿಕೆ ಪಡೆದುಕೊಂಡವರ ಸಂಖ್ಯೆ ಹೆಚ್ಚಿದೆ. ಇಲ್ಲಿಯವರೆಗೆ ಜಿಲ್ಲೆಯಲ್ಲಿ 45-59 ವರ್ಷದೊಳಗಿನ 2,23,828 ಮಂದಿ ಕೋವಿಶೀಲ್ಡ್‌ ಮೊದಲ ಡೋಸ್‌ ಹಾಗೂ 71,316 ಮಂದಿ ಎರಡನೇ ಡೋಸ್ ಹಾಗೂ 60 ವರ್ಷ ಮೇಲ್ಪಟ್ಟ 1,54,830 ಮಂದಿ ಮೊದಲ ಡೋಸ್‌‌ ಹಾಗೂ 77,913 ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. 45-59 ವರ್ಷದೊಳಗಿನ 29,070 ಮಂದಿ ಕೋವ್ಯಾಕ್ಸಿನ್‌ನ ಮೊದಲ ಡೋಸ್, 16,755 ಮಂದಿ ಎರಡನೇ ಡೋಸ್‌, 60 ವರ್ಷ ಮೇಲ್ಪಟ್ಟ 23,245 ಮಂದಿ ಮೊದಲ ಡೋಸ್ 17,020 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

“ಜಿಲ್ಲೆಯಲ್ಲಿ ರೋಗ ನಿರೋಧಕ ಲಸಿಕೆ ಹಂಚಿಕೆ ಸುಸೂತ್ರವಾಗಿ ನಡೆಯುತ್ತಿದೆ. ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಕೊರೊನಾ ಲಸಿಕೆ ಡೋಸ್‌‌ ಪೋಲಾಗಿಲ್ಲ. ನಿಗದಿತ ಗುರಿಗಿಂತ ಅಧಿಕ ಪ್ರಗತಿ ಸಾಧಿಸಿದೆ. ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ಹತ್ತು ಲಕ್ಷಕ್ಕೂ ಅಧಿಕ ಮಂದಿಗೆ ಲಸಿಕೆ ನೀಡಲಾಗಿದೆ” ಎಂದು ಆರ್‌ಸಿಹೆಚ್‌ ಅಧಿಕಾರಿ ಡಾ. ರಾಜೇಶ್‌ ತಿಳಿಸಿದ್ದಾರೆ.