ಮಂಗಳೂರು: ಫೆ. 26 ರಂದು ಖಾಸಗಿ ಸಾರಿಗೆ ವಲಯದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಸಂಚಾರ ಉದ್ಘಾಟನೆ – vishwanews24

Featured, ದಕ್ಷಿಣ ಕನ್ನಡ

ಮಂಗಳೂರು: ಫೆ. 26 ರಂದು ಖಾಸಗಿ ಸಾರಿಗೆ ವಲಯದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಸಂಚಾರ ಉದ್ಘಾಟನೆ

ಮಂಗಳೂರು: ಕರಾವಳಿಯ ಪ್ರಮುಖ ನಗರ ಮಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಇತಿಹಾಸವೊಂದು ಸೃಷ್ಟಿಯಾಗುತ್ತಿದೆ. ನಗರದ ಖಾಸಗಿ ಸಾರಿಗೆ ವಲಯದಲ್ಲಿ ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಸಿದ್ಧವಾಗಿದ್ದು, ಫೆಬ್ರವರಿ 26 ರಂದು ಉದ್ಘಾಟನೆಗೊಳ್ಳಲಿದೆ. ಜೊತೆಗೆ ಉದ್ಘಾಟನೆಗೊಂಡ ಕೆಲವು ದಿನಗಳಲ್ಲೇ ರಸ್ತೆಗಿಳಿಯಲಿದೆ.

ಗಣೇಶ್ ಪ್ರಸಾದ್ ಟ್ರಾವೆಲ್ಸ್ ಸಂಸ್ಥೆಯು ಈ ಪರಿಸರ ಸ್ನೇಹಿ ಹೆಜ್ಜೆಯನ್ನು ಇಟ್ಟಿದ್ದು, ನಗರದ ಪ್ರಮುಖ ಮಾರ್ಗವಾದ ‘ರೂಟ್ ನಂಬರ್ 27’ ಅಂದರೆ ಮಂಗಳಾದೇವಿ-ಸ್ಟೇಟ್ ಬ್ಯಾಂಕ್-ಮಂಗಳಾದೇವಿ ನಡುವೆ ಈ ಬಸ್ ಕಾರ್ಯಾಚರಣೆ ನಡೆಸಲಿದೆ.

ಇದನ್ನೂ ಓದಿ : 👇

ಸರ್ಕಾರಕ್ಕೆ ಹೊರೆಯಾದ್ರೂ ಗ್ಯಾರಂಟಿಗಳನ್ನ ಜಾರಿಗೊಳಿಸಿದೆ : ಡಿಕೆ ಶಿವಕುಮಾರ್ – vishwanews24

ತನ್ನ ನವೀನ ಪ್ರಯತ್ನಗಳ ಮೂಲಕ ಗಮನ ಸೆಳೆದಿರುವ ಗಣೇಶ್ ಪ್ರಸಾದ್ ಟ್ರಾವೆಲ್ಸ್ನ ಮಾಲೀಕರಾದ ದಿಲ್‌ರಾಜ್ ಆಳ್ವ ಅವರು ಮಂಗಳೂರಿನ ಸಾರಿಗೆ ಲೋಕಕ್ಕೆ ಈ ತಾಂತ್ರಿಕ ಬದಲಾವಣೆಯನ್ನು ಪರಿಚಯಿಸುತ್ತಿದ್ದಾರೆ. ಪುಣೆ ಮೂಲದ ನ್ಯೂಟನ್ ಆಟೋ ಸಂಸ್ಥೆಯಿಂದ 9 ಮೀಟರ್ ಉದ್ದದ, 32 ಆಸನಗಳ ಸುಸಜ್ಜಿತ ಎಲೆಕ್ಟ್ರಿಕ್ ಬಸ್ಸನ್ನು ಖರೀದಿಸಲಾಗಿದೆ. ವಿಶೇಷವೆಂದರೆ, ನ್ಯೂಟನ್ ಆಟೋ ಸಂಸ್ಥೆ ತಯಾರಿಸಿದ ಮೊದಲ ಇ-ಬಸ್ ಇದಾಗಿದ್ದು, ಮಂಗಳೂರಿನ ರಸ್ತೆಗಳಲ್ಲಿ ತನ್ನ ಮೊದಲ ಪಯಣ ಆರಂಭಿಸುತ್ತಿರುವುದು ವಿಶೇಷವಾಗಿದೆ. ಈ ಕುರಿತು ಮಾಹಿತಿ ನೀಡಿರುವ ದಿಲ್‌ರಾಜ್ ಆಳ್ವ ಅವರು, ಸದ್ಯ ನೋಂದಣಿ ಪ್ರಕ್ರಿಯೆಗಳು ಪೂರ್ಣಗೊಂಡ ಕೂಡಲೇ ಸಾರ್ವಜನಿಕ ಸೇವೆಗೆ ಬಸ್ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ಈ ಇ-ಬಸ್‌ನ ತಾಂತ್ರಿಕ ಸಾಮರ್ಥ್ಯದ ಬಗ್ಗೆ ಹೇಳುವುದಾದರೆ, ಒಮ್ಮೆ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಸುಮಾರು 200 ಕಿಲೋಮೀಟರ್‌ಗಳವರೆಗೆ ಚಲಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಫಾಸ್ಟ್ ಚಾರ್ಜಿಂಗ್ ಮೂಲಕ ಕೇವಲ ಎರಡು ಗಂಟೆಗಳಲ್ಲಿ ಬ್ಯಾಟರಿಯನ್ನು ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಅಥವಾ ಸ್ತೋ ಚಾರ್ಜಿಂಗ್ ಮೂಲಕ ಐದು ಗಂಟೆಗಳ ಕಾಲಾವಧಿ ತೆಗೆದುಕೊಳ್ಳುತ್ತದೆ. ಸದ್ಯಕ್ಕೆ ಒಂದೇ ಒಂದು ಬಸ್ ಇರುವುದರಿಂದ ಪ್ರತ್ಯೇಕ ಚಾರ್ಜಿಂಗ್ ಸ್ಟೇಷನ್ ನಿರ್ಮಿಸುವ ಯೋಜನೆಯನ್ನು ಮಾಲೀಕರು ಹೊಂದಿಲ್ಲ. ಬದಲಾಗಿ ಮಂಗಳೂರು ನಗರದ ಆಯ್ದ ಪೆಟ್ರೋಲ್ ಬಂಕ್‌ಗಳಲ್ಲಿ ಲಭ್ಯವಿರುವ ಸಾರ್ವಜನಿಕ ಚಾರ್ಜಿಂಗ್ ಪಾಯಿಂಟ್‌ಗಳನ್ನೇ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : 👇

ಸರ್ಕಾರಕ್ಕೆ ಹೊರೆಯಾದ್ರೂ ಗ್ಯಾರಂಟಿಗಳನ್ನ ಜಾರಿಗೊಳಿಸಿದೆ : ಡಿಕೆ ಶಿವಕುಮಾರ್ – vishwanews24

ಪರಿಸರ ರಕ್ಷಣೆಯ ದೃಷ್ಟಿಯಿಂದ ಈ ಬದಲಾವಣೆ ಅತ್ಯಂತ ಮಹತ್ವದ್ದಾಗಿದೆ. ಸದ್ಯಕ್ಕೆ ಗಣೇಶ್ ಪ್ರಸಾದ್ ಟ್ರಾವೆಲ್ಸ್ ಒಟ್ಟು ಐದು ಬಸ್‌ಗಳನ್ನು ಹೊಂದಿದ್ದು, ಪ್ರತಿಯೊಂದು ಬಸ್ ದಿನವೊಂದಕ್ಕೆ 19 ಟ್ರಿಪ್‌ಗಳನ್ನು ಮಾಡುತ್ತವೆ. ಇದರಲ್ಲಿ ಒಂದು ಹಳೆಯ ಇಂಧನ ಚಾಲಿತ ಬಸ್ಸಿನ ಜಾಗದಲ್ಲಿ ಈಗ ಹೊಸ ಎಲೆಕ್ಟ್ರಿಕ್ ಬಸ್ ಸೇವೆ ನೀಡಲಿದೆ. ಲಾಭ-ನಷ್ಟದ ಲೆಕ್ಕಾಚಾರಕ್ಕಿಂತಲೂ ಹೆಚ್ಚಾಗಿ, ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಿ ಪರಿಸರಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎನ್ನುವುದು ದಿಲ್‌ರಾಜ್ ಆಳ್ವ ಅವರ ಮುಖ್ಯ ಉದ್ದೇಶವಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ತಮ್ಮ ಎಲ್ಲಾ ಬಸ್‌ಗಳನ್ನು ಎಲೆಕ್ಟ್ರಿಕ್ ಆಗಿ ಬದಲಿಸುವ ಗುರಿಯನ್ನು ಅವರು ಹೊಂದಿದ್ದಾರೆ. ಇದಕ್ಕಾಗಿ ಸಮಾನ ಮನಸ್ಕರೊಂದಿಗೆ ಸೇರಿ ‘ಚಾರ್ಜ್ ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್’ ಎಂಬ ಕಂಪನಿಯನ್ನು ಆರಂಭಿಸಿದ್ದು, ಭವಿಷ್ಯದಲ್ಲಿ ನಗರದ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಹಸಿರುಮಯವಾಗಿಸುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ.

ಇದನ್ನೂ ಓದಿ : 👇

ಮೇ ತಿಂಗಳಲ್ಲಿ ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಪ್ರಥಮ ಬಾರಿಗೆ  ಯಕ್ಷಗಾನ ಪ್ರದರ್ಶನ : ಯು. ಟಿ .ಖಾದರ್‌  – vishwanews24

Leave a Reply