ಮಂಗಳೂರು: ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ ; ಆರೋಪಿ ಖುಲಾಸೆ – vishwanews24
ಮಂಗಳೂರು: ಬಾಲಕಿಯ ಅಪಹರಿಸಿ ಅತ್ಯಾಚಾರ ಪ್ರಕರಣ ; ಆರೋಪಿ ಖುಲಾಸೆ
ಮಂಗಳೂರು: ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ ವಿರುದ್ಧ ಹೊರಿಸಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ತೀರ್ಮಾನಿಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್.ಮಾನು ಈ ತೀರ್ಪು ಪ್ರಕಟಿಸಿದ್ದಾರೆ ಎಂದು ಆರೋಪಿ ಪರ ವಕೀಲ ಸುಕೇಶ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಇದನ್ನೂ ಓದಿ:
ಮಣಿಪಾಲ : ಮಾದಕ ವಸ್ತು ಮಾರಾಟ ಪ್ರಕರಣ ; ತಲೆಮರೆಸಿಕೊಂಡಿದ್ದ ಆರೋಪಿ ಬಂಧನ – vishwanews24
ಪ್ರಕರಣದ ವಿವರ: 2025ರ ಜುಲೈ ಎರಡನೇ ವಾರದಲ್ಲಿ ಮೂಲ್ಕಿ ಬಪ್ಪನಾಡು ದೇವಸ್ಥಾನದ ಬಳಿಯಿಂದ ಅಪ್ರಾಪ್ತೆಯನ್ನು ಆರೋಪಿ ತನ್ನ ಬೈಕ್‌ನಲ್ಲಿ ಉಡುಪಿ ಜಿಲ್ಲೆಯ ಕಾಪು ಬೀಚ್‌ಗೆ ಕರೆದೊಯ್ದು ಅಲ್ಲಿನ ಅರಣ್ಯ ಪ್ರದೇಶದಲ್ಲಿ ಅತ್ಯಾಚಾರ ಎಸಗಿದ್ದ. ಈ ವಿಷಯವನ್ನು ಮನೆಯವರಿಗೆ ತಿಳಿಸಿದರೆ ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ, ದಿನಾಂಕ 23-07-2025ರಂದು ದೂರು ದಾಖಲಿಸಿಕೊಂಡ ಮೂಲ್ಕಿ ಠಾಣೆ ಪೊಲೀಸರು, ಆರೋಪಿಯನ್ನು ಅದೇ ದಿನ ಬಂಧಿಸಿದ್ದರು. ನೊಂದ ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ, ಆಕೆ ಗರ್ಭಿಣಿ ಎಂಬುದು ಗೊತ್ತಾಗಿತ್ತು. ತನಿಖೆ ನಡೆಸಿದ ಪೊಲೀಸರು ಮಂಗಳೂರಿನ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಕರಣವನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿದ ಪೋಕ್ಸೋ ನ್ಯಾಯಾಲಯ, ನೊಂದ ಬಾಲಕಿ ಮತ್ತು ಆಕೆಯ ಪೋಷಕರ ಹೇಳಿಕೆಯನ್ನು ದಾಖಲಿಸಿತ್ತು. ಪ್ರಾಸಿಕ್ಯೂಷನ್ ಪರವಾಗಿ 8 ಮಂದಿ ಸಾಕ್ಷಿಗಳ ವಿಚಾರಣೆ ನಡೆಸಿದ್ದು, 26 ದಾಖಲೆಗಳು ಹಾಗೂ ಒಂದು ಮೊಬೈಲ್‌ನ್ನು ಸಾಕ್ಷಿಯಾಗಿ ಗುರುತಿಸಲಾಗಿತ್ತು.
ಇದನ್ನೂ ಓದಿ:
ಕೊಲೆ ಪ್ರಕರಣ : ಕಮಲಾಕರ್ ಭಟ್ ಸೇರಿ ಐವರಿಗೆ ಫೆ.21 ರವರೆಗೆ ನ್ಯಾಯಾಂಗ ಬಂಧನ – vishwanews24
ಅಭಿಯೋಜನೆಯ ಪರವಾಗಿ ಸಾಕ್ಷಿ ನೀಡಿದ್ದ ನೊಂದ ಬಾಲಕಿ ಹಾಗೂ ಪೋಷಕರು ಅತ್ಯಾಚಾರ ನಡೆದಿದೆ ಎಂಬುದನ್ನು ಹೇಳಿದ್ದರು. ಸಾಕ್ಷಿಗಳೂ ಅಭಿಯೋಜನೆಗೆ ಪೂರಕವಾಗಿ ಸಾಕ್ಷಿ ನೀಡಿದ್ದರು. ಆದರೆ, ಬಲವಾದ ಸಾಕ್ಷ್ಯಾಧಾರಗಳ ಕೊರತೆಯ ಹಿನ್ನೆಲೆಯಲ್ಲಿ ಆರೋಪಿ ಮೇಲೆ ಹೊರಿಸಲಾದ ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆ ವಿಫಲವಾಗಿದೆ ಎಂದು ತೀರ್ಮಾನಿಸಿದ ನ್ಯಾಯಾಲಯದ ನ್ಯಾಯಾಧೀಶ ಕೆ.ಎಸ್.ಮಾನು ಅವರು ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ಪ್ರಕಟಿಸಿದರು.
