ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ – vishwanews24
ಮಂಗಳೂರು: ದಸರಾ ರಜೆ ವೇಳೆ ಸೆಮಿಸ್ಟರ್ ಪರೀಕ್ಷೆ: ಖಾಸಗಿ ಕಾಲೇಜು ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ
ಮಂಗಳೂರು: ದಸರಾ ಸಂಭ್ರಮದ ನಡುವೆಯೇ ಕಾಲೇಜು ಆಡಳಿತ ಮಂಡಳಿಯು ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಿರುವುದನ್ನು ವಿರೋಧಿಸಿ, ನಗರದ ಖ್ಯಾತ ಕಾಲೇಜಿನ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಕಾಲೇಜು ಗೇಟ್ ಎದುರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಮಂಗಳೂರಿನ ಬೆಂದೂರ್ವೆಲ್ ಬಳಿಯಿರುವ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಲಾಗಿದೆ.
ಕಾಲೇಜಿನ ನಡೆಯನ್ನು ಖಂಡಿಸಿ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ. ಈ ಪ್ರತಿಭಟನೆಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಾಥ್ ನೀಡಿದೆ.
ಕಾಲೇಜು ಆಡಳಿತ ಮಂಡಳಿಯ ಈ ಕ್ರಮದಿಂದಾಗಿ ದಸರಾ ಆಚರಣೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಆಕ್ಷೇಪಿಸಿರುವ ನೂರಾರು ವಿದ್ಯಾರ್ಥಿಗಳು, ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜು ಮುಂಭಾಗ ಧರಣಿ ಕುಳಿತಿದ್ದಾರೆ. ಇದನ್ನೂ ಓದಿ: ಸೌದಿ ವಿಮಾನ ನಿಲ್ದಾಣದ ಮೇಲೆ ಮತ್ತೆ ಹೌತಿ ಕ್ಷಿಪಣಿ ದಾಳಿ: ಹೈದರಾಬಾದ್ ಮೂಲದ ವ್ಯಕ್ತಿ ದುರ್ಮರಣ
ಪರೀಕ್ಷೆಯನ್ನು ಮುಂದೂಡುವಂತೆ ಆಡಳಿತ ಮಂಡಳಿಗೆ ಮೊದಲೇ ಮನವಿ ಸಲ್ಲಿಸಲಾಗಿತ್ತು. ಆದರೂ ವಿದ್ಯಾರ್ಥಿಗಳ ಹಿತಾಸಕ್ತಿ ಕಡೆಗಣಿಸಿ, ಯಾವುದೇ ಸ್ಪಂದನೆ ನೀಡದೆ ಉದ್ದಟತನ ಪ್ರದರ್ಶಿಸಲಾಗುತ್ತಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ದಸರಾ ಹಬ್ಬದ ವೇಳೆ ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆಯನ್ನು ಸರಿಪಡಿಸಲು ಹಾಗೂ ಪರೀಕ್ಷೆಗಳನ್ನು ತಕ್ಷಣವೇ ಮುಂದೂಡುವಂತೆ ಆಗ್ರಹಿಸಿ ವಿದ್ಯಾರ್ಥಿ ಸಂಘಟನೆಗಳು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ನೀಡಿವೆ. ಸದ್ಯ ಕಾಲೇಜು ಗೇಟ್ ಎದುರು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರಿದಿದ್ದು, ಆಡಳಿತ ಮಂಡಳಿಯ ನಿರ್ಧಾರದ ವಿರುದ್ಧ ಘೋಷಣೆಗಳನ್ನು ಕೂಗಲಾಗುತ್ತಿದೆ.
