ಮಂಡ್ಯದ ಸ್ವಾಭಿಮಾನ ಉಳಿಸಿ – ಸುಮಲತಾ ಬೆಂಬಲಿಸಿ ಘೋಷಣೆಯೊಂದಿಗೆ ಜೆಡಿಎಸ್ ಭದ್ರಕೋಟೆಯಲ್ಲಿ ಸುಮಲತಾ ಶಕ್ತಿ ಪ್ರದರ್ಶನ – Vishwanews24

Featured, ಜಿಲ್ಲೆ, ರಾಜ್ಯ ನ್ಯೂಸ್

ಮಂಡ್ಯ: ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಆವರಣದಲ್ಲಿ ಬುಧವಾರ ಬೆಳಿಗ್ಗೆಯಿಂದಲೂ ಸಾವಿರಾರು ಜನ ಸೇರಿದ್ದರು. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಮಪತ್ರಕ್ಕೆ ಪೂಜೆ ಸಲ್ಲಿಸಿದ ಸುಮಲತಾ 11 ಗಂಟೆಗೆ ನಗರ ತಲುಪಿದರು.

ನಾಮಪತ್ರ ಸಲ್ಲಿಕೆ ಬಳಿಕ ಮೆರವಣಿಗೆ ಮೂಲಕ ಸಿಲ್ವರ್​ ಜ್ಯೂಬ್ಲಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಸಮಾವೇಶ ಸ್ಥಳಕ್ಕೆ ಆಗಮಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಮಂಡ್ಯ ಜನರು ಸುಮಲತಾಗೆ ಹರ್ಷೋದ್ಘಾರ ಕೂಗುವ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಗರ ಸಭೆ ಸದಸ್ಯರು ಕಾಣಿಸಿಕೊಳ್ಳುವ ಮೂಲಕ ಸುಮಲತಾಗೆ ಬೆಂಬಲ ನೀಡಿದರು.

ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ತಬ್ಧಗೊಂಡಿತ್ತು. ವಾಹನ ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಷ್ಟು ದೊಡ್ಡ ಸಂಖ್ಯೆಯನ್ನು ಸುಮಲತಾ ಹಾಗೂ ಬೆಂಬಲಿಗರೇ ನಿರೀಕ್ಷೆ ಮಾಡಿರಲಿಲ್ಲ. ‘ಮಂಡ್ಯದ ಸ್ವಾಭಿಮಾನ ಉಳಿಸಿ – ಸುಮಲತಾ ಬೆಂಬಲಿಸಿ’ ಎಂದು ಘೋಷಣೆ ಮೊಳಗಿಸಿದರು.

ಭಾಷಣ ಆರಂಭಿಸಿದ ಸುಮಲತಾ, ‘ನಾನು ಮಳವಳ್ಳಿ ಹುಚ್ಚೇಗೌಡರ ಸೊಸೆ, ನಿಮ್ಮ ಪ್ರೀತಿಯ ಅಂಬರೀಷ್‌ ಧರ್ಮಪತ್ನಿ, ಈ ಮಣ್ಣಿನ ಮಗಳು. 40 ವರ್ಷಗಳಿಂದ ಚಿತ್ರರಂಗದಲ್ಲಿದ್ದೇನೆ, 5 ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ. 27 ವರ್ಷಗಳಿಂದ ಅಂಬರೀಷ್ ಪತ್ನಿಯಾಗಿದ್ದೇನೆ. ಯಾರು ಎಂದು ಪ್ರಶ್ನಿಸಿದವರಿಗೆ ಇದೇ ನನ್ನ ಉತ್ತರ. ಕೆಲವರ ಮಾತಿನಿಂದ ನೋವಾಗಿದೆ, ಅವು ನನ್ನ ಪಾಲಿನ ಬಾಣಗಳಾಗಿದ್ದವು. ಹೆಣ್ಣಾಗಿ ಅವಮಾನ ನುಂಗಿಕೊಂಡಿದ್ದೇನೆ. ಅವರ ಮಾತುಗಳಿಗೆ ಉತ್ತರ ಕೊಟ್ಟಿಲ್ಲ. ಜನರೇ ಉತ್ತರ ಕೊಟ್ಟಿದ್ದಾರೆ’ ಎಂದರು.

‘ಕಾಂಗ್ರೆಸ್‌ನಿಂದ ನಾನು ಕಣಕ್ಕೆ ಇಳಿಯಬೇಕಾಗಿತ್ತು. ಆದರೆ ಪಕ್ಷದ ಮುಖಂಡರು ಮೈತ್ರಿಧರ್ಮ ಎಂದರು. ಆದರೆ ಎಷ್ಟರಮಟ್ಟಿಗೆ ಮೈತ್ರಿಧರ್ಮ ಪಾಲಿಸುತ್ತಿದ್ದಾರೆ ಎಂಬುದನ್ನು ನೀವೇ ನೋಡಿದ್ದೀರಿ. ಕಾರ್ಯಕರ್ತರಿಗೆ ಬೆದರಿಕೆ ಹಾಕಿದರೆ ನಡೆಯುತ್ತಾ? ಎಲ್ಲರ ಬೆಂಬಲ ಸಿಕ್ಕಿದೆ. ನನ್ನ ಹೋರಾಟ ಸಾಧಾರಣವಲ್ಲ, ಹಿಮಾಲಯ ಹತ್ತಿದಷ್ಟು ಕಷ್ಟ ಎಂಬುದು ಗೊತ್ತಿದೆ. ಕಷ್ಟ ಇರಬಹುದು, ಆದರೆ ಅಸಾಧ್ಯವಲ್ಲ. ಅಂಬರೀಷ್‌ ಜನರಿಗಾಗಿ ಕೇಂದ್ರ ಸಚಿವ ಸ್ಥಾನವನ್ನೇ ತ್ಯಾಗ ಮಾಡಿದ್ದಾರೆ. ಅಂಬರೀಷ್‌ ಪ್ರೀತಿಸುತ್ತಿದ್ದ ಜನರನ್ನು ನಾನು ಬಿಟ್ಟು ಹೋದರೆ, ಅಂಬರೀಷ್‌ ಪತ್ನಿ ಎಂದು ಹೇಳುವ ಅರ್ಹತೆ ನನ್ನಲ್ಲಿ ಉಳಿಯುವುದಿಲ್ಲ. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದೇನೆ’ ಎಂದು ಸಮಜಾಯಿಷಿ ನೀಡಿದರು.

ಸುಮಲತಾ ಜನರ ಮುಂದೆ ಕೈಚಾಚಿ ‘ಅಂಬರೀಷ್‌ ಎಂದೂ ಯಾರ ಬಳಿಯೂ ಕೈಚಾಚಿಲ್ಲ. ಆದರೆ ಅವರ ಪ್ರೀತಿಗಾಗಿ ನಾನು ನಿಮ್ಮ ಮುಂದೆ ಕೈಚಾಚುತ್ತೇನೆ. ನನ್ನ ಕೈ ಹಿಡಿಯುತ್ತೀರಾ’ ಎಂದು ಪ್ರಶ್ನಿಸಿದರು. ಜನ ಕೈ ಮೇಲೆತ್ತಿ ಬೆಂಬಲ ವ್ಯಕ್ತಪಡಿಸಿದರು. ನಂತರ ರೈತಸಂಘದ ಬೆಂಬಲ ಸ್ಮರಿಸಿದಾಗ ಹಸಿರು ಟವೆಲ್‌ ಬೀಸಿ ಹೆಗಲ ಮೇಲೆ ಹಾಕಿಕೊಂಡರು.

ನಟ ದೊಡ್ಡಣ್ಣ, ರಾಕ್‌ಲೈನ್‌ ವೆಂಕಟೇಶ್‌, ಕಾಂಗ್ರೆಸ್‌ ಮುಖಂಡರಾದ ಸಚ್ಚಿದಾನಂದ, ಪಿ.ಎಂ.ಸೋಮಶೇಕರ್‌, ಎಂ.ಪ್ರಸನ್ನ, ಅಂಬರೀಷ್‌ ಪುತ್ರ ಅಂಬರೀಷ್‌ಗೌಡ, ಬ್ರಾಹ್ಮಣ ಸಮಾಜದ ಬೆಳ್ಳೂರು ಶಿವರಾಂ, ಕುರುಬ ಸಮಾಜದ ದೊಡ್ಡಯ್ಯ, ಮುಸ್ಲಿಂ ಮುಖಂಡ ಅನ್ವರ್‌ ಪಾಷಾ, ಕ್ರೈಸ್ತರ ಮುಖಂಡ ಜಾರ್ಜ್‌ ಇದ್ದರು.