ಮಂಡ್ಯ ಲೋಕಸಭಾ ಚುನಾವಣೆ : ನಿಖಿಲ್ – ಸುಮಲತಾ ಪೈಪೋಟಿಯ ನಡುವೆ ಹುತಾತ್ಮ ಯೋಧನ ಪತ್ನಿ ಎಂಟ್ರಿ !! Vishwanews24
ಮಂಡ್ಯ: ಲೋಕಸಭಾ ಮಹಾ ಚುನಾವಣೆಗೆ ಮುಹೂರ್ತ ನಿಗದಿಯಾಗಲು ದಿನಗಣನೆ ಪ್ರಾರಂಭವಾಗಿರುವಂತೆಯೇ ರಾಜ್ಯದ ವಿವಿಧ ಹೈವೋಲ್ಟೇಜ್ ಲೋಕಸಭಾ ಕ್ಷೇತ್ರಗಳಲ್ಲಿ ರಂಗಿನ ರಾಜಕೀಯಕ್ಕೆ ಹೆಸರಾಗಿರುವ ಸಕ್ಕರೆ ನಾಡು ಮಂಡ್ಯದಲ್ಲಿ ಈ ಬಾರಿಯ ಸ್ಪರ್ಧೆ ಕುತೂಹಲದ ತುತ್ತತುದಿಯನ್ನು ತಲುಪಿದಂತಿದೆ.
ಒಂದೆಡೆ ದೋಸ್ತಿಗಳ ಮಾತಿಗೆ ಕಟ್ಟುಬಿದ್ದು ಆಡಳಿತ ಪಾಲುದಾರ ಪಕ್ಷವಾಗಿರುವ ಕಾಂಗ್ರೆಸ್ ಈ ಕ್ಷೇತ್ರವನ್ನು ಜೆಡಿ(ಎಸ್) ಗೆ ಬಿಟ್ಟುಕೊಟ್ಟಿರುವ ಕಾರಣ ಸ್ವತಃ ಮುಖ್ಯಮಂತ್ರಿಯವರ ಪುತ್ರ ನಿಖಿಲ್ ಕುಮಾರಸ್ವಾಮಿಯವರು ಇಲ್ಲಿ ಯುವ ಅಭ್ಯರ್ಥಿಯಾಗಿ ಮೈತ್ರಿಕೂಟದ ಬೆಂಬಲದೊಂದಿಗೆ ಸ್ಪರ್ಧಿಸುವುದು ಖಚಿತವಾಗಿದೆ. ಇನ್ನೊಂದೆಡೆ ಮಂಡ್ಯದ ಗಂಡು ದಿವಂಗಂತ ಅಂಬರೀಷ್ ಅವರ ಪತ್ನಿ ಸುಮಲತಾ ಅವರು ತಮಗೆ ಕಾಂಗ್ರೆಸ್ ಪಕ್ಷ ಮಂಡ್ಯದಲ್ಲಿ ಸ್ಪರ್ಧಿಸಲು ಅವಕಾಶ ನಿರಾಕರಿಸುವ ಮೂಲಕ ತಮ್ಮ ಪತಿ ಮತ್ತು ಅವರ ಬೆಂಬಲಿಗರಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿ ಈ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ ಮಾಡಿದಂತಿದೆ.
ಇದೆಲ್ಲದರ ನಡುವೆ ಪುಲ್ವಾಮ ಉಗ್ರದಾಳಿಯಲ್ಲಿ ಉಗ್ರರ ಬಾಂಬ್ ದಾಳಿಗೆ ಬಲಿಯಾದ ಸಿ.ಆರ್.ಪಿ.ಎಫ್. ಯೋಧ ಗುರು ಅವರ ಪತ್ನಿ ಕಲಾವತಿ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿಯೊಂದು ದಟ್ಟವಾಗಿ ಹರಿದಾಡುತ್ತಿದೆ. ಕಲಾವತಿಯವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ರೆ ಹಿಂದುಳಿದ ಮಡಿವಾಳ ಸಮುದಾಯ ಪ್ರಾಮುಖ್ಯತೆ ನೀಡಿದಂತಾಗುತ್ತದೆ ಹಾಗೂ ಅನುಕಂಪದ ಅಲೆ ಮತಗಳು ದೊರಕಬಹುದು ಎಂಬ ಲೆಕ್ಕಚಾರದೊಂದಿಗೆ ಹಿಂದುಳಿದ ವರ್ಗಗಳ ನಾಯಕ ದ್ವಾರಕಾನಾಥ್, ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಅವರಿಗೆ ಟಿಕೆಟ್ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಪ್ರಮುಖ ಪ್ರತಿಪಕ್ಷ ಬಿ.ಜೆ.ಪಿ.ಯ ರಾಜಕೀಯ ನಡೆ ಮಾತ್ರ ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ದೋಸ್ತಿ ಸರಕಾರಕ್ಕೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವ ಮಂಡ್ಯ ಲೋಕಸಭಾ ಕ್ಷೇತ್ರವು ಮುಂಬರುವ ದಿನಗಳಲ್ಲಿ ಯಾವೆಲ್ಲಾ ರಾಜಕೀಯ ಬಣ್ಣಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಾಗಿದೆ
