ಮಂತ್ರಾಲಯ ಬಳಿ ಅಪಘಾತ: ಮಂಗಳೂರಿನ ಹಾಪ್ಕಾಮ್ಸ್ ನ ಪ್ರಧಾನ ವ್ಯವಸ್ಥಾಪಕ ರವಿ ಶೆಟ್ಟಿ ನಿಧನ -vishwanews24
ಮಂತ್ರಾಲಯ ಬಳಿ ಅಪಘಾತ: ಮಂಗಳೂರಿನ ಹಾಪ್ಕಾಮ್ಸ್ ನ ಪ್ರಧಾನ ವ್ಯವಸ್ಥಾಪಕ ರವಿ ಶೆಟ್ಟಿ ನಿಧನ
ಕರ್ನೂಲು: ಕರ್ನೂಲು ಜಿಲ್ಲೆಯ ಮಂತ್ರಾಲಯದ ಬಳಿ ಮಂಗಳವಾರ ನಸುಕಿನ ಜಾವ (ಜು.21) ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಹಾಪ್ಕಾಮ್ಸ್ ನ ಪ್ರಧಾನ ವ್ಯವಸ್ಥಾಪಕ ರವಿಶೆಟ್ಟಿ (43) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ರವಿ ಶೆಟ್ಟಿ ಅವರು ತಮ್ಮ ಸ್ನೇಹಿತರೊಂದಿಗೆ ಮಂತ್ರಾಲಯ ರಾಘವೇಂದ್ರ ಸ್ವಾಮಿಯ ದರ್ಶನಕ್ಕೆ ತೆರಳಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರ ಕಾರು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ರವಿ ಶೆಟ್ಟಿಯವರು ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಂಗಳೂರಿನ ಪ್ರದೀಪ್ ಆಳ್ವ, ಪುರುಷೋತ್ತಮ ಭಂಡಾರಿ, ಸಿಎ ಸುಧೇಶ್ ರೈ ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರ ಪ್ರಕಾರ, ರವಿಶೆಟ್ಟಿ ತಮ್ಮ ಸ್ನೇಹಿತರೊಂದಿಗೆ ರಾಘವೇಂದ್ರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಮಂತ್ರಾಲಯಕ್ಕೆ ಹೊರಟಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರು ಮಂತ್ರಾಲಯದ ಬಳಿ ನಿಯಂತ್ರಣ ತಪ್ಪಿ ಕಲ್ವರ್ಟ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ರವಿಶೆಟ್ಟಿ ಸ್ಥಳದಲ್ಲೇ ಸಾವನ್ನಪ್ಪಿದರು. ಕಾರಿನಲ್ಲಿದ್ದ ಇತರ ಮೂವರು ಕುಟುಂಬ ಸದಸ್ಯರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯರು ತಕ್ಷಣ ಸ್ಪಂದಿಸಿ ಗಾಯಾಳುಗಳನ್ನು ಎಮ್ಮಿಗನೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲಿ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಅಪಘಾತ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆ ನಡೆಯುತ್ತಿದೆ.
