ಮಡ್ಗಾಂವ್ – ಮಂಗಳೂರು ‘ವಂದೇ ಭಾರತ್’ ರೈಲು ಬೆಂಗಳೂರಿಗೆ ವಿಸ್ತರಣೆ -vishwanews24
ಮಡ್ಗಾಂವ್ – ಮಂಗಳೂರು ‘ವಂದೇ ಭಾರತ್’ ರೈಲು ಬೆಂಗಳೂರಿಗೆ ವಿಸ್ತರಣೆ
ಮಂಗಳೂರು/ಉಡುಪಿ: ಈ ಹಿಂದೆ ಮಂಗಳೂರು ಸೆಂಟ್ರಲ್-ಮಡ್ಗಾಂವ್ ನಡುವೆ ಓಡುತ್ತಿದ್ದ ವಂದೇಭಾರತ್ ರೈಲನ್ನು ಯಶವಂತಪುರಕ್ಕೆ ವಿಸ್ತರಣೆ ಮಾಡಲಾಗಿದೆ. ಈ ಕುರಿತು ರೈಲ್ವೇ ಖಾತೆ ಸಚಿವ ಅಶ್ವಿನಿ ವೈಷ್ಣವ್ ಅವರು ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಬಿ.ವೈ ರಾಘವೇಂದ್ರ ಹಾಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದಿದ್ದು, ಖಚಿತಪಡಿಸಿದ್ದಾರೆ. ಇದರೊಂದಿಗೆ ವೇಳಾಪಟ್ಟಿಯಲ್ಲೂ ಬದಲಾವಣೆಯಾಗುವ ಸಾಧ್ಯತೆ ಇದೆ.
ಅಧಿಕೃತ ವೇಳಾಪಟ್ಟಿ ಬಾರದಿದ್ದರೂ ಲಭ್ಯ ಮಾಹಿತಿಯಂತೆ ಯಶವಂತಪುರದಿಂದ ಬೆಳಗ್ಗೆ 6.05ಕ್ಕೆ ಹೊರಡುವ ವಂದೇಭಾರತ್ ರೈಲಿಗೆ ಶ್ರವಣಬೆಳಗೊಳ, ಹಾಸನ, ಸಕಲೇಶಪುರ, ಸುಬ್ರಹ್ಮಣ್ಯ ರೋಡ್, ಕಬಕ ಪುತ್ತೂರು, ಮಂಗಳೂರು ಜಂಕ್ಷನ್, ಉಡುಪಿ, ಕುಂದಾಪುರ, ಬೈಂದೂರು, ಮುರುಡೇಶ್ವರ, ಗೋಕರ್ಣ ರೋಡ್ ಮತ್ತು ಕಾರವಾರಗಳಲ್ಲಿ ನಿಲುಗಡೆ ಸಾಧ್ಯತೆ ಇದೆ.
ಮಡಗಾಂವ್-ಯಶವಂತಪುರ ರೈಲು ಮಡಗಾಂವ್ನಿಂದ ಬೆಳಗ್ಗೆ 5.30ಕ್ಕೆ ಹೊರಟು ಯಶವಂತಪುರಕ್ಕೆ ಸಂಜೆ 6.40ಕ್ಕೆ ತಲುಪುವುದು.
ಸ್ವಯಂಚಾಲಿತ ಎಮರ್ಜೆನ್ಸಿ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ, ತಲಾ 8 ಬೋಗಿಗಳ ಎರಡು ವಂದೇಭಾರತ್ ರೇಕ್ಗಳನ್ನು ಈ ಸೇವೆಗೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ರೈಲ್ವೇ ಸಚಿವಾಲಯವು ಕೆಲವು ದಿನಗಳ ಹಿಂದೆಯಷ್ಟೇ ವಂದೇಭಾರತ್ ರೈಲಿನ ಪರೀಕ್ಷಾರ್ಥ ಸಂಚಾರವನ್ನು ಯಶವಂತಪುರ-ಮಂಗಳೂರು ಜಂಕ್ಷನ್-ಯಶವಂತಪುರ ಮಧ್ಯೆ ನಡೆಸಿತ್ತು.
ಸದ್ಯ ಇರುವ ವಂದೇಭಾರತ್ ರೈಲು ಮಂಗಳೂರು ಸೆಂಟ್ರಲ್ ಮಡ್ಗಾಂವ್ ಮಧ್ಯೆ ಸಂಚರಿಸುತ್ತಿದೆ. ಇದನ್ನು ಯಶವಂತಪುರಕ್ಕೆ ವಿಸ್ತರಣೆ ಮಾಡುವಾಗ ರೈಲು ಮಂಗಳೂರು ಜಂಕ್ಷನ್ ಅನ್ನು ಸಂಪರ್ಕಿಸುತ್ತದೆ. ಹಾಗಾಗಿ ಮಂಗಳೂರು ಸೆಂಟ್ರಲ್ ಅನ್ನು ಬಿಟ್ಟು ಹೋಗುವಂತಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ. ಮಂಗಳೂರು ಸೆಂಟ್ರಲ್ ಹಾಗೂ ಬೆಂಗಳೂರು ಮಧ್ಯೆ ಪ್ರತ್ಯೇಕ ಇನ್ನೊಂದು ವಂದೇಭಾರತ್ ಅನ್ನು ಮುಂದೆಯಾದರೂ ಪರಿಚಯಿಸಲಿ ಎಂಬ ಒತ್ತಾಯ ಯಾತ್ರಿಗಳಿಂದ ವ್ಯಕ್ತವಾಗಿದೆ. ಈಗಿರುವ ಮಂಗಳೂರು ಸೆಂಟ್ರಲ್-ಮಡಗಾಂವ್ ವಂದೇ ಭಾರತ್ 2023ರ ಡಿ. 31ರಿಂದ ಚಾಲ್ತಿಯಲ್ಲಿದೆ.
