ಮತ ಎಣಿಕೆ: ಉಡುಪಿ, ದ. ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ. ಗೆದ್ದಅಭ್ಯರ್ಥಿಗಳು ವಿಜಯೋತ್ಸವ ನಡೆಸುವಂತಿಲ್ಲ

Featured, ಉಡುಪಿ, ದಕ್ಷಿಣ ಕನ್ನಡ

ಮಂಗಳೂರು: ನಾಳೆ ಚುನಾವಣಾ ಮತ ಎಣಿಕೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ನಿಷೇಧಾಜ್ಞೆ ಜಾರಿಯಾಗಿದೆ.

ಮಂಗಳೂರು ನಗರದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಮತ್ತು ನಗರ ಪೊಲೀಸ್ ಆಯುಕ್ತ ವಿಪುಲ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,  ಕಾನೂನು ಉಲ್ಲಂಘಿಸಿದರೆ ಅಥವಾ ವಿಜಯೋತ್ಸವ ಮಾಡಿದರೆ ಮುಲಾಜಿಲ್ಲದೆ ಎಲ್ಲರ ಮೇಲೂ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದು ಮಧ್ಯರಾತ್ರಿಯಿಂದ 16ರ ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಾಗಿದ್ದು, ಎರಡು ದಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಾಗಲಿದೆ. ಜಿಲ್ಲೆಯಲ್ಲಿ ಇಂದು ಮಧ್ಯ ರಾತ್ರಿಯಿಂದ ನಾಳೆ ಮಧ್ಯರಾತ್ರಿ ವರೆಗೂ ಮದ್ಯಮಾರಾಟವನ್ನು ಕೂಡ ನಿಷೇಧವಾಗಲಿದೆ ಅಂದ್ರು.

ಉಡುಪಿ 
ಮೇ.15 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಮೇ 15ರ ಬೆಳಿಗ್ಗೆ ಗಂಟೆ 6 ರಿಂದ 17ರ ಬೆಳಿಗ್ಗೆ ಗಂಟೆ 6 ರವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಲಾಗಿದ್ದು ಯಾವುದೇ ಸಭೆ ಸಮಾರಂಭ, ವಿಜಯೋತ್ಸವ, ಮೆರವಣಿಗೆ ಮಾಡುವುದು, ಪರ ಹಾಗೂ ವಿರೋಧ ಘೋಷಣೆ ಕೂಗುವುದು, ಗುಂಪು ಸೇರುವುದು ನಿಷೇಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶ ನೀಡಿದ್ದಾರೆ.

ಗೆಲವು ಸಾಧಿಸಿದ ಹಾಗೂ ಸೋತ ಪಕ್ಷಗಳ ನಡುವೆ ಗೊಂದಲ ಉಂಟಾಗಿ ಗಲಭೆ ನಡೆಯುವ ಸಾಧ್ಯತೆಗಳಬಗ್ಗೆ ಉಡುಪಿ ಜಿಲ್ಲಾ ಎಸ್ಪಿ ನೀಡಿದ ವರದಿಯಂತೆ ಈ ಆದೇಶ ಮಾಡಲಾಗಿದೆ.

One thought on “ಮತ ಎಣಿಕೆ: ಉಡುಪಿ, ದ. ಕ ಜಿಲ್ಲೆಯಲ್ಲಿ ನಿಷೇಧಾಜ್ಞೆ. ಗೆದ್ದಅಭ್ಯರ್ಥಿಗಳು ವಿಜಯೋತ್ಸವ ನಡೆಸುವಂತಿಲ್ಲ

Comments are closed.