ಮಹಿಳೆಯರ ಹಕ್ಕುಗಳಿಗಾಗಿ ಕಾಂಗ್ರೆಸ್​​ ಹೋರಾಟ ನಡೆಸುತ್ತದೆ : ಪ್ರಿಯಾಂಕಾ ಗಾಂಧಿ -Vishwanews24

Featured, ರಾಷ್ಟ್ರ ನ್ಯೂಸ್

ಲಖನೌ: ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ತಮ್ಮನ್ನು ರಕ್ಷಿಸಿಕೊಳ್ಳಲು ಪುರುಷರಿಂದ ಅಧಿಕಾರವನ್ನು ಕಸಿದುಕೊಳ್ಳಬೇಕು ಎಂದು ಮಹಿಳೆಯರಿಗೆ ಕರೆ ನೀಡಿದ್ದಾರೆ.

ಎರಡು ದಿನಗಳ ಲಖನೌ ಭೇಟಿಯಲ್ಲಿರುವ ಕಾಂಗ್ರೆಸ್​​ ನಾಯಕಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಅಧಿಕಾರ ಸಿಗಬೇಕೆಂದು ನಾನು ಹೇಳುತ್ತೇನೆ. ಪುರುಷರಿಂದ ಅಧಿಕಾರವನ್ನು ಕಸಿದುಕೊಳ್ಳುವಂತೆ ನನ್ನ ಸಹೋದರಿಯರಿಗೆ ಹೇಳಬಯಸುತ್ತೇನೆ.

ಪಂಚಾಯತ್ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಹೋರಾಡಲು ಮತ್ತು ರಾಜಕೀಯದಲ್ಲಿ ಮುಂದೆ ಬರಲು ನಾನು ನನ್ನ ಸಹೋದರಿಯರಿಗೆ ಕರೆ ನೀಡುತ್ತಿದ್ದೇನೆ. ನೀವು ಅಧಿಕಾರವನ್ನು ಪಡೆದಿದ್ದರೆ ಇಂತಹ ಘಟನೆಗಳು ನಡೆದಾಗ ನಿಮ್ಮನ್ನು ರಕ್ಷಿಸಿಕೊಳ್ಳಬಹುದು ಎಂದರು. ಮಹಿಳೆಯರ ಹಕ್ಕುಗಳಿಗಾಗಿ ಎಲ್ಲ ಹಂತಗಳಲ್ಲಿ ಕಾಂಗ್ರೆಸ್​​ ಹೋರಾಟ ನಡೆಸುತ್ತದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ನಂತರ ಯೋಗಿ ಆದಿತ್ಯನಾಥ್ ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದರು. ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ದುರ್ಘಟನೆಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ಮಹಿಳೆಯರ ಮೇಲಿನ ಅಪರಾಧ ಪ್ರಕರಣಗಳಲ್ಲಿ ಉತ್ತರ ಪ್ರದೇಶ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಉನ್ನಾವೊದಲ್ಲಿ, ಕಳೆದ 11 ತಿಂಗಳಲ್ಲಿ ಸುಮಾರು 90 ಅತ್ಯಾಚಾರ ಪ್ರಕರಣಗಳು ನಡೆದಿರುವುದು ಕಂಡುಬಂದಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಕೊನೆಯ ವರೆಗೂ ಅಪರಾಧಿಗಳನ್ನು ರಕ್ಷಿಸಿತು ಎಂದು ದೂರಿದರು.