ಮುಂಬಯಿ ದಾಳಿ ಸಂಚುಕೋರ ಜೆಯುಡಿ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಬಂಧಿಸಿ ಜೈಲಿಗಟ್ಟಿದ ಪಾಕ್ -Vishwanews24

Featured, ಅಂತಾರಾಷ್ಟ್ರೀಯ ನ್ಯೂಸ್

ಲಾಹೋರ್: ಮುಂಬಯಿ ದಾಳಿ ಸಂಚುಕೋರ ಹಾಗೂ ನಿಷೇಧಿತ ಜಾಮತ್‌ ಉದ್ ದಾವಾ ಉಗ್ರ ಸಂಘಟನೆ ಮುಖ್ಯಸ್ಥ ಹಫೀಜ್ ಸಯೀದ್‌ನನ್ನು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಭಯೋತ್ಪಾದನೆ ನಿಗ್ರಹ ಇಲಾಖೆ ಬುಧವಾರ ಬಂಧಿಸಿ ಜೈಲಿಗೆ ಕಳುಹಿಸಿದೆ.

ಭಯೋತ್ಪಾದನೆ ನಿಗ್ರಹ ಕೋರ್ಟಿನ ಮುಂದೆ ವಿಚಾರಣೆಗೆ ಹಾಜರಾಗಲು ಲಾಹೋರ್‌ನಿಂದ ಗುರ್ಜನ್‌ವಾಲಾಗೆ ತೆರಳುತ್ತಿದ್ದಾಗ ಸಯೀದ್‌ನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗರಿಷ್ಠ ಭದ್ರತೆಯ ಕೋಟ್ ಲಖ್‌ಪತ್ ಜೈಲಿಗೆ ಸಯೀದ್‌ನನ್ನು ಕಳುಹಿಸಲಾಗಿದ್ದು, ನ್ಯಾಯಾಂಗ ರಿಮಾಂಡ್ ವಿಧಿಸಲಾಗಿದೆ.

2008ರಲ್ಲಿ ಮುಂಬಯಿ ಮೇಲೆ ಉಗ್ರದಾಳಿ ನಡೆಸಿದ ಲಷ್ಕರೆ ತಯ್ಬಾ ಭಯೋತ್ಪಾದಕ ಸಂಘಟನೆಯ ರಾಜಕೀಯ ಮುಖವಾದ ಜಮಾತ್‌ ಉದ್ ದಾವಾದ ಮುಖ್ಯಸ್ಥ ಈ ಸಯೀದ್. ಮುಂಬಯಿ ದಾಳಿಯಲ್ಲಿ 166 ಮಂದಿ ಮೃತಪಟ್ಟಿದ್ದರು.

ಅಮೆರಿಕದ ವಿದೇಶಾಂಗ ಸಚಿವಾಲಯ ಸಯೀದ್‌ನನ್ನು ಜಾಗತಿಕ ಭಯೋತ್ಪಾದಕನೆಂದು 2012ರಲ್ಲೇ ಘೋಷಿಸಿದೆ. ಅಲ್ಲದೆ 100 ಕೋಟಿ ಡಾಲರ್‌ ಬಹುಮಾನವನ್ನೂ ಈತನ ತಲೆಗೆ ನಿಗದಿಪಡಿಸಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ ಆರೋಪದ ಮೇಲೆ ಹಫೀಜ್ ಸಯೀದ್ ಮೇಲೆ ಈತನಕ ಒಟ್ಟು 23 ಪ್ರಕರಣ ದಾಖಲಾಗಿತ್ತು.

ಇದೀಗ ಮಹತ್ವದ ಬೆಳವಣಿಗೆಯಲ್ಲಿ ಭಯೋತ್ಪಾದನಾ ನಿಗ್ರಹ ಇಲಾಖೆ ಪಾಕಿಸ್ತಾನದ ಗರಿಷ್ಠ ಭದ್ರತೆಯನ್ನು ಹೊಂದಿರುವ ಕೋಟ್ ಲಖ್‌ಪತ್ ಜೈಲಿಗೆ ಸಯೀದ್‌ನನ್ನು ಕಳುಹಿಸಲಾಗಿದ್ದು, ನ್ಯಾಯಾಂಗ ರಿಮಾಂಡ್ ವಿಧಿಸಲಾಗಿದೆ.