ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್ )ಘಟಕಕ್ಕೆ ಕನ್ನಡಿಗ ಅಧಿಕಾರಿ ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ದಯಾ ನಾಯಕ್‌ -Vishwanews24

Featured, ಉಡುಪಿ

ಕಾರ್ಕಳ: ಮಹಾರಾಷ್ಟ್ರದ ಖಾರ್‌ನಲ್ಲಿ ಪೊಲೀಸ್‌ ಅಧಿಕಾರಿಯಾಗಿದ್ದ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಮೂಲದ ದಯಾ ನಾಯಕ್‌ ಅವರು ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳ  (ಎಟಿಎಸ್‌)ದ ಮುಂಬಯಿ ಘಟಕಕ್ಕೆ ಭಡ್ತಿ ಹೊಂದಿದ್ದಾರೆ. ಈ ಮೂಲಕ ಮುಂಬಯಿ ಎಟಿಎಸ್‌ ಘಟಕಕ್ಕೆ ಭಡ್ತಿ ಹೊಂದಿದ ಹಿರಿಯ ತುಳು-ಕನ್ನಡಿಗ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

ಅವರಿಗೆ 2004ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಹುಟ್ಟೂರಾದ ಎಣ್ಣೆಹೊಳೆಯಲ್ಲಿ ಶಾಲೆಯನ್ನು ನಿರ್ಮಿಸಿ ಸರಕಾರಕ್ಕೆ ಒಪ್ಪಿಸಿದ್ದರು. ಅವರ ಜೀವನ ಸಾಧನೆಗಳ ಮೇಲೆ ಬಾಲಿವುಡ್‌ನ‌ಲ್ಲಿ ಹಲವು ಸಿನೆಮಾಗಳು ಮೂಡಿಬಂದಿವೆ.

ಪ್ರಾಮಾಣಿಕತೆ, ಕಠಿಣ ಪರಿಶ್ರಮ, ಕರ್ತವ್ಯ ಪ್ರಜ್ಞೆ ಮತ್ತು ಸ್ನೇಹಪರತೆ ಇಂದು ತನ್ನನ್ನು ಈ ಮಟ್ಟಕ್ಕೆ ಸಾಧಿಸಲು ಸಹಾಯ ಮಾಡಿದೆ ಎಂದು ದಯಾ ನಾಯಕ್ ಸಂತೋಷ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ ಮುಂಬೈನಲ್ಲಿ ಅಪರಾಧ ಮತ್ತು ಅಪರಾಧಿಗಳ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
90 ರ ದಶಕದಲ್ಲಿ ಮುಂಬೈನಲ್ಲಿ ಭೂಗತ ಲೋಕವು ವಿಜೃಂಭಿಸುತ್ತಿದ್ದಾಗ ದಯಾ ನಾಯಕ್ ಪೊಲೀಸ್ ಪಡೆಗೆ ಸೇರಿದ್ದರು. ಮಾತ್ರವಲ್ಲದೆ ನಿರ್ಭಯವಾಗಿ ಭೂಗತ ಜಗತ್ತನ್ನು ಹತೋಟಿಗೆ ತೆಗೆದುಕೊಂಡು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು. 80 ಕ್ಕೂ ಹೆಚ್ಚು ಭೂಗತ ಪಾತಾಕಿಗಳನ್ನು ಎನ್ ಕೌಂಟರ್ ಮಾಡುವ ಮೂಲಕ ಎನ್ಕೌಂಟರ್ ಸ್ಪೆಷಲಿಸ್ಟ್ ಎಂದೇ ಪ್ರಸಿದ್ಧರಾದರು. ಮುಂಬೈನಲ್ಲಿ ಡ್ರಗ್ಸ್ ಜಾಲವನ್ನು ಮಟ್ಟ ಹಾಕುವಲ್ಲಿ ಶ್ರಮಿಸಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲದೆ ಹಲವು ಸಂಕೀರ್ಣವಾದ ಪ್ರಕರಣಗಳನ್ನು ಭೇದಿಸುವಲ್ಲಿ ಅವರು ಯಶಸ್ವಿಯಾದರು.