ಮುಖ್ಯಮಂತ್ರಿಯಿಂದ ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನ : ಲಾಲಾಜಿ ಆರ್‌. ಮೆಂಡನ್‌ -Vishwanews24

Featured, ಉಡುಪಿ

ಪಡುಬಿದ್ರಿ: ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ 25 ಕೋಟಿ ರೂ. ಅನುದಾನವನ್ನು ನೀಡಿರುತ್ತಾರೆ.  ಕ್ಷೇತ್ರದ ಶಾಸಕನಾಗಿ ವಿವಿಧ ಅನುದಾನವನ್ನು ಬಳಸಿಕೊಂಡು ಗ್ರಾಮದ ಅಭಿವೃದ್ಧಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ ಎಂದು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್‌. ಮೆಂಡನ್‌ ಹೇಳಿದರು.

ಅವರು ಸೆ.24ರಂದು ಉಚ್ಚಿಲ ಮಹಾಲಕ್ಷ್ಮೀ ಸಭಾಭವನದಲ್ಲಿ ನಡೆದ ಬಡಾಗ್ರಾಮ ಪಂಚಾಯತ್‌ ಇದರ 2019-20ನೇ ಸಾಲಿನ ಪ್ರಥಮ ಗ್ರಾಮಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಕಾಪು ಪುರಸಭೆಗೆ ಸೇರ್ಪಡೆೆಗೊಳಿಸುವ ಬಗ್ಗೆ ಗ್ರಾಮಸ್ಥರಿಗೆ ಮತ್ತಷ್ಟು ಅನ್ಯಾಯ ಆಗಬಾರದು. ಆ ನಿಟ್ಟಿನಲ್ಲಿ ಸಾಧಕ, ಬಾಧಕದ ಬಗ್ಗೆ ಚರ್ಚಿಸಲು ವಿಶೇಷ ಗ್ರಾಮಸಭೆಯನ್ನು ಕರೆಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದು ನಿರ್ಣಯ ಕೈಗೊಳ್ಳಲಾಯಿತು.

ಇನ್ನುಳಿದಂತೆ ಸೂಕ್ತವಾಗಿ ತ್ಯಾಜ್ಯ ಸಂಗ್ರಹ, ಗಿಡಗಂಟಿ ಕಟಾವು, ಬೀದಿ ದೀಪ ವ್ಯವಸ್ಥೆಯನ್ನು ಸಮರ್ಪಕವಾಗಿ ಒದಗಿಸುವಂತೆ ಒತ್ತಾಯಿಸಿದ ಗ್ರಾಮಸ್ಥರು, ತುಕ್ಕು ಹಿಡಿದ ವಿದ್ಯುತ್‌ ತಂತಿ, ನೇತುಬೀಳುವ ವಿದ್ಯುತ್‌ ತಂತಿ ಬದಲಾಯಿಸುವಂತೆ ಮೆಸ್ಕಾಂ ಅಧಿಕಾರಿಗೆ ಆಗ್ರಹಿಸಿದ್ದು, ಕೇವಲ ಪುಸ್ತಕದಲ್ಲಿ ಬರೆದದ್ದನ್ನು ಕಾರ್ಯ ರೂಪಕ್ಕೆ ತರುವಂತೆ ಆಗ್ರಹಿಸಿದರು.

ನಗರಾಭಿವೃದ್ಧಿ ಅಧಿಕಾರಿ ಒಂದು ದಿನವಾದರೂ ಸಂಪೂರ್ಣವಾಗಿ ಸಮರ್ಪಕವಾಗಿ ಕರ್ತವ್ಯ ನಿಭಾಯಿಸುವಂತೆ ವ್ಯವಸ್ಥೆ ಕಲ್ಪಿಸಲು ಶಾಸಕರಲ್ಲಿ ಕೋರಿಕೊಂಡರು. ಎರ್ಮಾಳುನಲ್ಲಿ ತಡೆರಹಿತ ಬಸ್ಸು ನಿಲುಗಡೆಯನ್ನು ಕಡ್ಡಾಯಗೊಳಿಸುವಂತೆ ಬಂದ ಅರ್ಜಿಯನ್ನು ಸಭೆಗೆ ತಿಳಿಸಲಾಯಿತು. ಬಡಾ ಎರ್ಮಾಳಿನಲ್ಲಿ ಕೆಪಿಎಸ್‌ ಶಾಲೆ ಆರಂಭಿಸಲು ಒತ್ತಾಯ ಕೇಳಿ ಬಂದಿತ್ತು.

ಸಿಬಂದಿ ಚಂದ್ರಾವತೀ ವಿ.ಆಚಾರ್ಯ ವರದಿ ವಾಚಿಸಿದರು. ಕಾರ್ಯದರ್ಶಿ ಪೂರ್ಣಿಮಾ ಎಂ.ಬಂಗೇರ ವಂದಿಸಿದರು. ಸಿಬಂದಿ ವರ್ಗ, ಗ್ರಾಮಸ್ಥರು ಉಪಸ್ಥಿತರಿದ್ದರು.