ಮೂಡಬಿದಿರೆ : ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ‌

Featured, ದಕ್ಷಿಣ ಕನ್ನಡ

ಮಂಗಳೂರು, ಮಾರ್ಚ್ 18 : ಮೂಡುಬಿದಿರೆಯ ಪ್ರತಿಷ್ಠಿತ ಕಾಲೇಜಿನ ಹಾಸ್ಟೆಲ್ ನಲ್ಲಿ ವಾರ್ಡನ್ ಗಳು ವಿದ್ಯಾರ್ಥಿಗಳಿಗೆ ಲಾಠಿ ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ ಎಂಬ ಆರೋಪ ಇದೀಗ ವಿದ್ಯಾರ್ಥಿಗಳಿಂದ ವ್ಯಕ್ತವಾಗಿದೆ. ಮಾ 17 ರ ಶನಿವಾರ ಈ ಘಟನೆ ನಡೆದಿದ್ದು, ಸಿಬ್ಬಂದಿ ಕೃತ್ಯ ವಿರೋಧಿಸಿ ವಿದ್ಯಾರ್ಥಿಗಳು ಇಂದು ಬೆಳಗ್ಗಿನಿಂದಲೇ ಪ್ರತಿಭಟನೆ ಆರಂಭಿಸಿದ್ದಾರೆ.  ವಿದ್ಯಾರ್ಥಿಗಳ ಕೊಠಡಿಗೆ ನುಗ್ಗಿದ್ದ ವಾರ್ಡನ್ ಗಳ ತಂಡ ಕ್ಷುಲಕ ಕಾರಣಕ್ಕೆ ಲಾಠಿ ಹಿಡಿದು ಸುಮಾರು 20ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ತೀವ್ರವಾಗಿ ಥಳಿಸಿದ್ದಾರೆ ಎಂದು ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಥಳಿತಕ್ಕೆ ಒಳಗಾದ 20 ವಿದ್ಯಾಥಿಗಳಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

 

ಘಟನೆಯ ವಿವರ

ವಿದ್ಯಾರ್ಥಿಗಳು ನೀಡಿದ ಮಾಹಿತಿಯಂತೆ, ಪಿಯುಸಿ ಪರೀಕ್ಷೆ ಮುಗಿದ ಹಿನ್ನೆಲೆಯಲ್ಲಿ ಕೆಲವು ವಿದ್ಯಾರ್ಥಿಗಳು ಸೇರಿ ಸಂಭ್ರಮಾಚರಣೆಗಾಗಿ ಹಾಸ್ಟೆಲ್ ನ ಕ್ಯಾಂಟೀನ್ ಗೆ ತೆರಳಿದ್ದಾರೆ. ಅಲ್ಲಿ ಊಟ ಸರಿ ಇಲ್ಲವೆಂದು ಕ್ಯಾಂಟಿನ್ ಸಿಬ್ಬಂದಿಗಳೊಂದಿಗೆ ಮಾತಿನ ಚಕಮಕಿ ನಡೆಸಿ ವಿದ್ಯಾರ್ಥಿಗಳು ತಮ್ಮ ತಮ್ಮ ಕೊಠಡಿಗೆ ಹಿಂತಿರುಗಿದ್ದರು. ಆದರೆ ಕೆಲ ಸಮಯದ ಬಳಿಕ ಇದೇ ನೆಪ ಇಟ್ಟುಕೊಂಡು ಆಗಮಿಸಿದ ಪಾನಮತ್ತರಾದ ವಾರ್ಡನ್ ಗಳ  ತಂಡವು ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸತೊಡಗಿದ್ದಾರೆ.  ಥಳಿಸುವ ವಿಡಿಯೋವನ್ನು ಸ್ವತಃ ವಿದ್ಯಾರ್ಥಿಗಳೇ ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿ, ಮಾಧ್ಯಮಕ್ಕೆ ನೀಡಿದ್ದಾರೆ. ಘಟನೆ ಬಗ್ಗೆ ವಿದ್ಯಾರ್ಥಿಗಳ ಹೆತ್ತವರು ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ ಎನ್ನಲಾಗಿದೆ.