ಮೈಸೂರು ಜಿ.ಪಂ.ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಮುಂದುವರಿಕೆ: ಜಿ.ಟಿ.ದೇವೇಗೌಡ – Vishwanews24
ಮೈಸೂರು: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಗೆ ಕೇವಲ ಎರಡು ದಿನ ಉಳಿದಿದ್ದು, ತನ್ನೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಕಾಂಗ್ರೆಸ್ ನಿರಂತರವಾಗಿ ಒತ್ತಡ ಹೇರುತ್ತಿದ್ದರೂ, ಅದನ್ನು ಮೆಟ್ಟಿ ನಿಂತು ಬಿಜೆಪಿಯೊಂದಿಗೆ ಸಾಗಲು ಜೆಡಿಎಸ್ ನಿರ್ಧರಿಸಿದೆ.
ಮೊದಲ ಅವಧಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾಡಿಕೊಂಡು ಕಾಂಗ್ರೆಸ್‌ಗೆ ಆಘಾತ ನೀಡಿತ್ತು. ಇದೀಗ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನೂತನ ಸಾರಥಿಗಳ ಆಯ್ಕೆಗೆ ಫೆ. 23ರಂದು ಚುನಾವಣೆ ನಿಗದಿಯಾಗಿದೆ. ಈ ಬಾರಿ ಯಾವುದೇ ಕಾರಣಕ್ಕೂ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳಬಾರದು ಎಂದು ಕಾಂಗ್ರೆಸ್ ಪಟ್ಟು ಹಿಡಿದಿದೆ. ರಾಜ್ಯ ಸರಕಾರದ ಮೈತ್ರಿ ಪಕ್ಷ ಜೆಡಿಎಸ್‌ನ ಮೇಲೆ ಕಾಂಗ್ರೆಸ್ ನಿರಂತರ ಒತ್ತಡ ತಂದಿದೆ. ಒಂದು ಹಂತದಲ್ಲಿ ಜಿ.ಪಂ.ನಲ್ಲಿ ಮೈತ್ರಿ ಬದಲಾಗಿ ಕಾಂಗ್ರೆಸ್‌ನೊಂದಿಗೆ ಅಧಿಕಾರ ಹಂಚಿಕೊಳ್ಳುವ ಲಕ್ಷಣಗಳು ಕಂಡು ಬಂದರೂ ಇದೀಗ ಕಾಂಗ್ರೆಸ್‌ಗಿಂತ ಬಿಜೆಪಿಯೇ ಲೇಸು ಎಂಬ ತೀರ್ಮಾನಕ್ಕೆ ತೆನೆ ಪಾಳಯದ ಮುಖಂಡರು ಬಂದಿದ್ದಾರೆ.
ಕೇವಲ ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿ ‘ಮಹಾಘಟ್ ಬಂಧನ್’ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿಯೂ ಜೆಡಿಎಸ್-ಕಾಂಗ್ರೆಸ್ ಅಕ್ಕಪಕ್ಕ ನಿಂತುಕೊಂಡಿವೆ. ಇಂತಹದರಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ತಮ್ಮ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯೊಂದಿಗೆ ಕೈಜೋಡಿಸಿದರೆ ಮುಜುಗರಕ್ಕೆ ಒಳಗಾಗಬೇಕಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ಜೆಡಿಎಸ್‌ಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಿದ್ದಾರೆ. ಜೆಡಿಎಸ್‌ನ ವರ್ತನೆಯ ವಿರುದ್ಧ ಸಂಸದ ಧ್ರುವನಾರಾಯಣ್, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಡಾ. ಪುಷ್ಪಾ ಅಮರ್‌ನಾಥ್ ಅವರು ಸಿದ್ದರಾಮಯ್ಯರೊಂದಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಳೇ ದೋಸ್ತಿಯನ್ನೇ ಮುಂದುವರೆಸಲಾಗುವುದು ಎಂದು ಜೆಡಿಎಸ್ ಕೂಡ ಈಗಾಗಲೇ ಸ್ಪಷ್ಟನೆ ಕೊಟ್ಟಿದೆ. ನಾವು ಈಗಾಗಲೇ ಬಿಜೆಪಿ ಜೊತೆ 30 ತಿಂಗಳ ಅಧಿಕಾರ ನಡೆಸಿದ್ದೇವೆ. ಅವರ ಜೊತೆಯಲ್ಲೇ ಮುಂದುವರೆಯುತ್ತೇವೆ ಎಂಬ ಮಾತು ಕೂಡ ಕೊಟ್ಟಿದ್ದೇವೆ. ಹೀಗಾಗಿ ಬಿಜೆಪಿಗೆ ನಾವು ಮೋಸ ಮಾಡುವುದಿಲ್ಲ ಎಂಬ ಸ್ಪಷ್ಟನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

