ಯೋಗಿ ನಾಡಲ್ಲಿ ಕೇಸರಿ ಗಾಂಧಿ…

Featured, ದೇಶ

ಲಕ್ನೋ: ಕೇಸರಿ.. ಕೇಸರಿ.. ಕೇಸರಿ… ಅದೊಂದು ರಾಜ್ಯದಲ್ಲಿ ಎಲ್ಲೆಲ್ಲೂ ಕೇಸರಿ. ಉತ್ತರ ಪ್ರದೇಶದಲ್ಲಿ ಸರ್ಕಾರಿ ಕಟ್ಟಡಗಳು, ನಾಯಕರ ಪ್ರತಿಮೆಗಳು ಎಲ್ಲವೂ ಕೇಸರಿಮಯವಾಗ್ತಿವೆ. ಅದ್ರಲ್ಲೂ ಈ ಹಿಂದೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನೂ ಕೇಸರಿ ಮಯವಾಗಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಮತ್ತೆ ಬಾಬಾ ಸಾಹೇಬರ ಪುತ್ಥಳಿಯ ಬಣ್ಣವನ್ನ ಬದಲಿಸಿ ವಿವಾದಕ್ಕೆ ಫುಲ್​ಸ್ಟಾಪ್ ಇಟ್ಟಿದ್ದರು. ಇದೀಗ ಮತ್ತೆ ಕೇಸರಿ ವಿವಾದ ಹುಟ್ಟಿಕೊಂಡಿದೆ.

ಎರಡು ದಿನಗಳ ಹಿಂದಷ್ಟೇ ಸಿಎಂ ಹೋಗಿ ಆದಿತ್ಯನಾಥ್, ದೀನ್ ದಯಾಳ್ ಉಪಾಧ್ಯಾಯ ರೇಲ್ವೆ ನಿಲ್ದಾಣಕ್ಕೆ ಕೇಸರಿ ಬಣ್ಣ ಬಳಿಯುವಂತೆ ಆದೇಶಿಸಿದ್ದರು. ಇದರ ಬೆನ್ನಲ್ಲೇ ಈಗ ಮಹಾತ್ಮ ಗಾಂಧಿ ಪ್ರತಿಮೆಗೂ ಕೇಸರಿ ಬಣ್ಣ ಬಳಿಯಲಾಗಿದೆ. ಶಹಜನ್​ಪುರ ಜಿಲ್ಲೆಯ ಢಾಕಾ ಗಂ​ಶ್ಯಾಂಪುರದಲ್ಲಿರುವ ಗಾಂಧಿ ಪ್ರತಿಮೆಗೆ ಸರ್ಕಾರದ ಆದೇಶವೇ ಇಲ್ಲದಿದ್ರೂ ಕೇಸರಿ ಬಣ್ಣ ಬಳಿಯಲಾಗಿದೆ.

ಇಲ್ಲಿನ ಸರ್ಕಾರಿ ಶಾಲೆ ಆವರಣದಲ್ಲಿರುವ ಗಾಂಧಿ ಪ್ರತಿಮೆಗೆ ಕೇಸರಿ ಬಣ್ಣ ಬಳಿದಿದ್ದಾರೆ. ಇದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಇದು ಬಿಜೆಪಿ ಕಾರ್ಯಕರ್ತರ ಕೃತ್ಯ ಅಂತ ಕಾಂಗ್ರೆಸ್ ಆರೋಪಿಸಿದೆ. ಇನ್ನು, ಈ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ತನಿಖೆಗೆ ಆದೇಶಿಸಿದ್ದು, ಉಪವಿಭಾಗದ ಮ್ಯಾಜಿಸ್ಟ್ರೇಟ್ ಇದರ ನೇತೃತ್ವ ವಹಿಸುವಂತೆ ಸೂಚಿಸಿದೆ.

ಆದ್ರೆ, ಜಿಲ್ಲಾಡಳಿತ ಮಾತ್ರ ಇದು ಕೇಸರಿ ಬಣ್ಣವಲ್ಲ, ತೆಳು ಹಳದಿ ಬಣ್ಣ ಅಂತ ಹೇಳಿದೆ. ಎರಡು ವರ್ಷಗಳ ಹಿಂದೆ ಶಾಲೆಯ ಮುಖ್ಯೋಪಾಧ್ಯಾಯರು ಪ್ರತಿಮೆಯ ದುರಸ್ಥಿ ಹಾಗೂ ಬಣ್ಣ ಬಳಿಯುವುದಕ್ಕೆ ಆದೇಶಿಸಿದ್ದರು. ಆಗ ಅದಕ್ಕೆ ತೆಳು ಹಳದಿ ಬಣ್ಣ ಹಚ್ಚಲಾಗಿತ್ತು ಅಂತ ಹೇಳಿದೆ. ಆದ್ರೆ ಇದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ಎರಡು ವರ್ಷಗಳ ಹಿಂದೆಯೇ ನಡೆದಿದ್ದ ಘಟನೆಯಾಗಿದ್ರೆ ಈ ಮೊದಲೇ ಇದು ಬೆಳಕಿಗೆ ಬರಬೇಕಿತ್ತಲ್ಲಾ ಅಂತ ಪ್ರಶ್ನಿಸಿದೆ.