ರಾಜಕಾರಣದ ಚಕ್ರವನ್ನು ಹೇಗೆ ತಿರುಗಿಸಬೇಕೆಂಬುದು ನನಗೂ ಗೊತ್ತಿದೆ : ಡಿ.ಕೆ.ಶಿ -Vishwanews24

Featured, ರಾಜ್ಯ ನ್ಯೂಸ್

ಮೈಸೂರು: ‘ರಾಜಕಾರಣದ ಚಕ್ರವನ್ನು ಹೇಗೆ ತಿರುಗಿಸಬೇಕೆಂಬುದು ನನಗೂ ಗೊತ್ತಿದೆ. ಅಂಥ ಸಮಯ ಬರಲಿದ್ದು, ಆಗ ಚಕ್ರ ತಿರುಗಿಸೋಣ. ಯಾರೂ ಶಾಶ್ವತ ಅಲ್ಲ’ ಎಂದು ಶಾಸಕ, ಕಾಂಗ್ರೆಸ್‌ ಮುಖಂಡ ಡಿ.ಕೆ.ಶಿವಕುಮಾರ್‌ ಗುರುವಾರ ಇಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಉದ್ದೇಶಿಸಿ ಮಾರ್ಮಿಕವಾಗಿ ನುಡಿದರು.

ಜಿಲ್ಲಾ ಕಾಂಗ್ರೆಸ್‌ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಯಡಿಯೂರಪ್ಪ ನನ್ನ ಕ್ಷೇತ್ರಕ್ಕೆ ಸಿಗಬೇಕಿದ್ದ ವೈದ್ಯಕೀಯ ಕಾಲೇಜನ್ನೇ ಕಿತ್ತುಕೊಂಡಿದ್ದಾರೆ. ಇನ್ನು ಇತರ ಶಾಸಕರ ಅನುದಾನ ಕಿತ್ತುಕೊಂಡಿರುವುದು ಯಾವ ಲೆಕ್ಕ?’ ಎಂದರು.

‘ಹಲವರನ್ನು ಬೆಳೆಸಿದ್ದೇನೆ, ಎಷ್ಟೋ ಮಂದಿಗೆ ಅಧಿಕಾರ ಕೊಟ್ಟಿದ್ದೇನೆ. ಆದರೆ, ಜಾತಿ ವ್ಯಾಮೋಹ, ಹಣಕ್ಕೆ ಮಾರಿಕೊಂಡಿಲ್ಲ. ಹಾಗೇನಾದರೂ ಇದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ನನ್ನ ಸ್ಟೈಲೇ ಬೇರೆ, ವಿಚಾರವೇ ಬೇರೆ. ಡಿಕೆಶಿ ಕರ್ನಾಟಕದ ಆಸ್ತಿ’ ಎಂದು ಹೇಳಿದರು.

ಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಮೈಸೂರಿಗೆ ಬಂದಿಳಿದ ಶಿವಕುಮಾರ್‌ ಅವರನ್ನು ಕಾಂಗ್ರೆಸ್‌ ಕಾರ್ಯಕರ್ತರು, ಅಭಿಮಾನಿಗಳು ಅದ್ದೂರಿಯಿಂದ ಸ್ವಾಗತಿಸಿದರು.

ರೈಲು ನಿಲ್ದಾಣದಿಂದ ಕಾಂಗ್ರೆಸ್‌ ಭವನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ, ಕ್ರೇನ್‌ ನೆರವಿನಿಂದ ಸೇಬಿನ ಹಾರ ಹಾಕಿದರು. ಜೆಡಿಎಸ್‌ ಕಾರ್ಯಕರ್ತರೂ ಇದ್ದರು. ವೇದಿಕೆ ಕಾರ್ಯಕ್ರಮದ ಬಳಿಕ ಸುತ್ತೂರು ಮಠಕ್ಕೆ ಭೇಟಿ ನೀಡಿದರು.