ರಾಜ್ಯದಲ್ಲಿ ತಾಪಮಾನ ಏರಿಕೆ: ಡೆಂಗ್ಯೂ, ಹೀಟ್ಸ್ಟ್ರೋಕ್ ಭೀತಿಗೆ ಆರೋಗ್ಯ ಇಲಾಖೆ ಅಲರ್ಟ್ – vishwanews24
ರಾಜ್ಯದಲ್ಲಿ ಹವಾಮಾನ ವೈಪರೀತ್ಯ ; ತಾಪಮಾನ ಏರಿಕೆ
ಡೆಂಗ್ಯೂ, ಹೀಟ್ಸ್ಟ್ರೋಕ್ ಭೀತಿಗೆ ಆರೋಗ್ಯ ಇಲಾಖೆ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಹವಾಮಾನ ವೈಪರೀತ್ಯ ತೀವ್ರಗೊಳ್ಳುತ್ತಿದ್ದು, ಒಂದೆಡೆ ಮಳೆಯಾದರೆ ಮತ್ತೊಂದೆಡೆ ಬಿಸಿಲಿನ ತಾಪ ಜನರನ್ನು ಕಂಗೆಡಿಸುತ್ತಿದೆ. ಒಂದು ದಿನ ಚಳಿ, ಮತ್ತೊಂದು ದಿನ ಬಿಸಿಲು ಎನ್ನುವಂತಾಗಿರುವ ಅಸ್ಥಿರ ವಾತಾವರಣದಿಂದ ಸಾರ್ವಜನಿಕರ ಆರೋಗ್ಯದ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಸಾಮಾನ್ಯ ಉಷ್ಣಾಂಶಕ್ಕಿಂತ ರಾಜ್ಯದ ಹಲವು ಭಾಗಗಳಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಹೆಚ್ಚಳ ದಾಖಲಾಗಿದ್ದು, ಸೆಪ್ಟೆಂಬರ್ನಲ್ಲೇ ಬೇಸಿಗೆಯ ವಾತಾವರಣ ಕಂಡುಬರುತ್ತಿದೆ. ಕೊಪ್ಪಳದಲ್ಲಿ 37°C, ಕಲಬುರಗಿ, ಬಳ್ಳಾರಿ ಮತ್ತು ರಾಯಚೂರಿನಲ್ಲಿ 34°C, ಕಾರವಾರ, ಬೀದರ್ ಮತ್ತು ಮೈಸೂರಿನಲ್ಲಿ 33°C ತಾಪಮಾನ ದಾಖಲಾಗಿದೆ. ಬೆಂಗಳೂರಿನಲ್ಲಿ 30.9°C ತಾಪಮಾನ ದಾಖಲಾಗಿದ್ದು, ಇದು ವಾಡಿಕೆಗಿಂತ ಸುಮಾರು 2°C ಹೆಚ್ಚಾಗಿದೆ. “ರಾಜ್ಯಾದ್ಯಂತ ಸಾಮಾನ್ಯ ಉಷ್ಣಾಂಶಕ್ಕಿಂತ 2ರಿಂದ 3 ಡಿಗ್ರಿ ಸೆಲ್ಸಿಯಸ್ವರೆಗೆ ಹೆಚ್ಚಿನ ತಾಪಮಾನ ದಾಖಲಾಗುತ್ತಿದೆ” ಎಂದು ಹವಾಮಾನ ಇಲಾಖೆ ವಿಜ್ಞಾನಿ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಉಡುಪಿ: ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಬಳಸಿ ನ್ಯಾಯಾಲಯಕ್ಕೆ ವಂಚಿಸಲು ಯತ್ನ: ಇಬ್ಬರ ಬಂಧನ – vishwanews24
ಹವಾಮಾನದ ದಿಢೀರ್ ಬದಲಾವಣೆಯಿಂದ ಜನರಲ್ಲಿ ನಿರ್ಜಲೀಕರಣ, ತೀವ್ರ ಸುಸ್ತು, ತಲೆನೋವು ಹಾಗೂ ಹೀಟ್ಸ್ಟ್ರೋಕ್ನಂತಹ ಸಮಸ್ಯೆಗಳ ಅಪಾಯ ಹೆಚ್ಚಿದೆ. ಮತ್ತೊಂದೆಡೆ, ಮಳೆ ನೀರು ನಿಂತಿರುವ ಪ್ರದೇಶಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚುವ ಸಾಧ್ಯತೆಯಿದ್ದು, ಡೆಂಗ್ಯೂ, ಚಿಕೂನ್ಗುನ್ಯಾ ಮತ್ತು ಮಲೇರಿಯಾ ಹರಡುವ ಆತಂಕವೂ ಎದುರಾಗಿದೆ. ಇದರ ಜೊತೆಗೆ ವೈರಲ್ ಜ್ವರ, ಕೆಮ್ಮು, ನೆಗಡಿ ಹಾಗೂ ಉಸಿರಾಟದ ಸಮಸ್ಯೆಗಳ ಪ್ರಕರಣಗಳೂ ಹೆಚ್ಚಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಮಾರ್ಗದರ್ಶನದಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಜೀವ ರಕ್ಷಕ ಔಷಧಿಗಳು, ORS ಪ್ಯಾಕೆಟ್ಗಳು, ಪರೀಕ್ಷಾ ಕಿಟ್ಗಳು ಹಾಗೂ ಹಾಸಿಗೆ ಸೌಲಭ್ಯಗಳನ್ನು ಸಿದ್ಧವಾಗಿಡಲು ಸೂಚಿಸಲಾಗಿದೆ. ಡೆಂಗ್ಯೂ ಮತ್ತು ಚಿಕೂನ್ಗುನ್ಯಾ ಪತ್ತೆ ಪರೀಕ್ಷೆಗಳಿಗೆ ಸರ್ಕಾರಿ ಪ್ರಯೋಗಾಲಯಗಳಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗೆ ಮನೆಮನೆ ಸಮೀಕ್ಷೆ ನಡೆಸಿ ರೋಗ ಲಕ್ಷಣಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವಂತೆ ಸೂಚಿಸಲಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿನ ಹವಾಮಾನ ಬದಲಾವಣೆ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆಯೂ ಚರ್ಚಿಸಲಾಗಿದೆ.
ವಿದ್ಯುತ್ ತಂತಿ ತಗುಲಿ ಗಣೇಶ ಮೂರ್ತಿ ಉರುಳಿ ಬಿದ್ದು ಯುವಕ ಸಾವು – vishwanews24
ಸಾಮಾನ್ಯವಾಗಿ ಸೆಪ್ಟೆಂಬರ್ನಲ್ಲಿ ತಂಪಾದ ವಾತಾವರಣ ಹಾಗೂ ಆಗಾಗ್ಗೆ ಮಳೆ ಕಂಡುಬರುವ ಬೆಂಗಳೂರಿನಲ್ಲಿ ಇದೀಗ ಅಸಾಮಾನ್ಯ ಬಿಸಿಲು ದಾಖಲಾಗುತ್ತಿದೆ. ಕಳೆದ ಒಂದು ವಾರದಲ್ಲಿ ನಗರದಲ್ಲಿ ಗರಿಷ್ಠ 31.22°C ತಾಪಮಾನ ದಾಖಲಾಗಿದ್ದು, ಕಳೆದ ಮೂರು ವರ್ಷಗಳ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಇದು ಗಮನಾರ್ಹ ಗರಿಷ್ಠ ತಾಪಮಾನವಾಗಿದೆ ಎಂದು ವರದಿಯಾಗಿದೆ.
ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿಯ ಪ್ರಕಾರ, ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32ರಿಂದ 33°C ಆಸುಪಾಸಿಗೆ ಏರಿಕೆಯಾಗುವ ಸಾಧ್ಯತೆಯಿದ್ದು, ವಾಡಿಕೆಗಿಂತ ಹಲವು ಡಿಗ್ರಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ತಾಪಮಾನ 33°C ಗಡಿ ದಾಟುವ ಸಾಧ್ಯತೆಯನ್ನೂ ಮುನ್ಸೂಚಿಸಲಾಗಿದೆ.
ಜಾಗತಿಕ ಮಟ್ಟದಲ್ಲಿ ‘ಸೂಪರ್ ಎಲ್ ನಿನೊ’ ಪರಿಣಾಮದಿಂದ ತಾಪಮಾನ ಮತ್ತಷ್ಟು ಏರಿಕೆಯಾಗುವ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ ಆರೋಗ್ಯ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬಿಸಿಲಿನ ತೀವ್ರತೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ಹೆಚ್ಚು ನೀರು ಸೇವಿಸುವುದು, ಅಗತ್ಯವಿದ್ದಾಗ ORS ಬಳಸುವುದು ಹಾಗೂ ಮಧ್ಯಾಹ್ನದ ಬಿಸಿಲಿನಲ್ಲಿ ಅನಗತ್ಯವಾಗಿ ಹೊರಗೆ ಹೋಗುವುದನ್ನು ತಪ್ಪಿಸುವುದು ಸೇರಿದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಉಡುಪಿ: ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಬಳಸಿ ನ್ಯಾಯಾಲಯಕ್ಕೆ ವಂಚಿಸಲು ಯತ್ನ: ಇಬ್ಬರ ಬಂಧನ – vishwanews24
