28 ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ , ರಾಜ್ಯವನ್ನು ಬಿಜೆಪಿ ಮುಕ್ತ ಕರ್ನಾಟಕವೇ ನಮ್ಮ ಗುರಿ :ಸಿದ್ದರಾಮಯ್ಯ – Vishwanews24
ಬೆಂಗಳೂರು: ಕರ್ನಾಟಕದ 28 ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳನ್ನು ಗೆಲ್ಲಿಸಿ ರಾಜ್ಯವನ್ನು ಬಿಜೆಪಿ ಮುಕ್ತ ಮಾಡಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರ ಹೊರವಲಯದ ಮಾದಾವರದಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್-ಜೆಡಿಎಸ್ ಜಂಟಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದೇವೇಗೌಡರ ಸೂಚನೆ ಮೇರೆಗೆ ಜಂಟಿ ಸಮಾವೇಶ ಆಯೋಜನೆ ಮಾಡಲಾಗಿದೆ. ಏಪ್ರಿಲ್-ಮೇನಲ್ಲಿ ಲೋಕ ಸಭೆ ಚುನಾವಣೆ ನಡೆಯುತ್ತಿದೆ. ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಲು ಪ್ರಯತ್ನ ನಡೆಸಿದ್ದಾರೆ. ಆದರೆ, ಜಾತ್ಯಾತೀತ ಶಕ್ತಿಗಳು ಒಂದಾಗಿ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಬೇಕು ಎಂದರು.
ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ರೈತರ ಆತ್ಮಹತ್ಯೆಗಳು ನಡೆಯುತ್ತಿವೆ. ಯುವಕರು ಉದ್ಯೋಗವಿಲ್ಲದೆ ಅತಂತ್ರರಾಗಿದ್ದಾರೆ. ಮಹಿಳೆಯರು, ದಲಿತರು ಭಯಭೀತರಾಗಿದ್ದಾರೆ. ಇಂಥ ಕೋಮುವಾದಿ ಸರ್ಕಾರವನ್ನು ತೊಲಗಿಸಲು ಜಾತ್ಯತೀತ ಶಕ್ತಿಗಳು ಒಂದಾಗಬೇಕು. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದು ರಾಹುಲ್ಗಾಂಧಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.
ರಾಜ್ಯದಲ್ಲಿ ಮೇ ತಿಂಗಳಲ್ಲಿ ಮೈತ್ರಿ ಸರ್ಕಾರ ಜಾರಿಗೆ ಬಂದಿದೆ. ಎರಡೂ ಪಕ್ಷಗಳು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಹಾಕಿಕೊಂಡು, ಬಡವರು, ದಲಿತರ ಪರ ಜನಪರ ಯೋಜನೆಗಳನ್ನು ಕೊಡಲಾಗುತ್ತಿದೆ. ರಾಜ್ಯದ 28 ಕ್ಷೇತ್ರಗಳನ್ನು ಒಟ್ಟಾಗಿ ಗೆಲ್ಲಬೇಕು. ಹಿಂದೆ ಏನೇ ಹೋರಾಟ ಮಾಡಿದ್ದರೂ ಬಿಜೆಪಿ ಸೋಲಿಸಲು ನಮ್ಮ ಭಿನ್ನಾಭಿಪ್ರಾಯ ಮರೆತು ಪ್ರಯತ್ನ ಮಾಡಬೇಕು ಎಂದರು. ಈಗ ರಾಜ್ಯಾಂಗಕ್ಕೆ ರಕ್ಷಣೆ ಇಲ್ಲ. ನಮ್ಮ ದೇಶದ ಜನರು ಬುದ್ದಿವಂತರು..
ಪ್ರಜಾಪ್ರಭುತ್ವಕ್ಕೆ ಅಪಾಯ ಬಂದಾಗ ಸಂವಿಧಾನ ಉಳಿಸುತ್ತಾರೆ ಎನ್ನುವ ನಂಬಿಕೆ ಇದೆ. ಮೋದಿ, ಅಮಿತ್ ಶಾ, ಆರ್ಎಸ್ಎಸ್ ಸಂಘಚಾಲಕರು ಸಂವಿಧಾನ ಬದಲಾವಣೆ ಮಾಡಬೇಕು, ಮೀಸಲಾತಿ ತೆಗೆಯಬೇಕು ಎಂದು ಹೇಳುತ್ತಾರೆ. ನಾವು ಸಂವಿಧಾನ ಉಳಿಸಬೇಕಿದೆ. ಪ್ರಧಾನಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.
