ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮೂರು ವರ್ಷದೊಳಗೆ ಬಿಜೆಪಿ ಕಾರ್ಯಾಲಯ ಸ್ಥಾಪನೆ : ನಳಿನ್ ಕುಮಾರ್ ಕಟೀಲ್ -Vishwanews24
ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎರಡರಿಂದ ಮೂರು ವರ್ಷದೊಳಗೆ ಪಕ್ಷದ ಕಾರ್ಯಾಲಯ ಪ್ರಾರಂಭಿಸುವ ಯೋಜನೆ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಬಿಜೆಪಿ ಜಿಲ್ಲಾ ಕಾರ್ಯಾಲಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಾಲಯಗಳನ್ನು ಪ್ರಾರಂಭಿಸಲು ಭೂಮಿ ಖರೀದಿಸುವ ಪ್ರಕ್ರಿಯೆ ಶುರುವಾಗಿದ್ದು, ಕೋಲಾರ, ಬಾಗಲಕೋಟೆ, ಬಳ್ಳಾರಿ, ವಿಜಯಪುರ, ರಾಯಚೂರು, ಬೀದರ್, ತಿಪಟೂರು ಮತ್ತು ಚಾಮರಾಜನಗರದಲ್ಲಿ ಕಾರ್ಯಾಲಯ ಆರಂಭವಾಗುತ್ತಿವೆ ಎಂದರು. ಮುಂದಿನ ದಿನಗಳಲ್ಲಿ ಹಾವೇರಿ, ರಾಮನಗರ, ಉತ್ತರ ಕನ್ನಡ ಸೇರಿದಂತೆ ಒಟ್ಟು 11 ಕಡೆ ಕಾರ್ಯಾಲಯಗಳನ್ನು ಪ್ರಾರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಬಿಜೆಪಿಯು ಗ್ರಾಮ ಪಂಚಾಯಿತಿಯಿಂದ ಹಿಡಿದು ಲೋಕಸಭೆ ಚುನಾವಣೆಯವರೆಗೂ ಅಧಿಕಾರ ಹಿಡಿಯಬೇಕು. ಇದಕ್ಕಾಗಿ ಬೇಕಾದ ಕೆಲಸಗಳನ್ನು ಈಗಿನಿಂದಲೇ ಮಾಡಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
